ನಿಶೆಯು ಸರಿದಿದೆ ಜಡತೆ ನೀಗಿದೆ

ನಿಶೆಯು ಸರಿದಿದೆ ಜಡತೆ ನೀಗಿದೆ ಉಷೆಯು ಗಾರುಡಿ ಬೀಸಿದೆ
ಕ್ಲೇಶ ಕಳೆದಿದೆ ಆಸೆ ಫಲಿಸಿದೆ ಯಶವು ನಾಡಿಗೆ ಕಾದಿದೆ || ಪ ||

ಸಂದ ಜಯವಿದು ಶುಭದ ಸೂಚನೆ ನನಸು ಸಾವಿರ ಕಲ್ಪನೆ
ಕುಂದು ಕೊರತೆಯ ನೀಗಿ ವಿಶ್ವಕೆ ವಂದ್ಯರೆನಿಸಲು ಪ್ರೇರಣೆ || 1 ||

ಅಂದು ಯಜ್ಞಕೆ ಸಮಿಧೆಯಾದರು ದಾಸ ಶರಣರು ಸಂತರು
ಇಂದು ಸೇವೆಯ ವ್ರತದಿ ಬದ್ಧರು ಕರ್ಮರಂಗದ ಧೀರರು || 2 ||

ಬಂಧುಭಾವವು ಐಕ್ಯ ತಂದಿದೆ ಜಾತಿಗೋಡೆಯ ಕೆಡವಿದೆ
ಸ್ವಾರ್ಥ ಸುಳಿಯದ ಕಾರ್ಯಸಾಧನೆ ಹೃದಯ ಹೃದಯವ ಬೆಸೆದಿದೆ || 3 ||

ನೆಲೆಯನರಸಿದೆ ಅಂತರಾತ್ಮವು ಕುಲದ ತರತಮ ತೊಲಗಿದೆ
ರಾಮಗುಹರ ಸುಧಾಮ ಕೃಷ್ಣರ ಸ್ನೇಹ ಸತ್ಯವ ತಿಳಿಸಿದೆ || 4 ||

ಒಂದೆ ಮನುಕುಲವೆಂಬ ಸೂತ್ರಕೆ ಹೊಸತು ಭಾಷ್ಯವು ಮೂಡಿದೆ
ಮಂದಹಾಸದಿ ನಲಿವ ಮಾತೆಗೆ ಜಗವೇ ನಮನವ ಸಲಿಸಿದೆ || 5 ||

4 thoughts on “ನಿಶೆಯು ಸರಿದಿದೆ ಜಡತೆ ನೀಗಿದೆ

  1. ನಮಸ್ತೆ ಈ ಗೀತೆಯ ಸಾಹಿತ್ಯ ಬಹಳ ವ್ಯತ್ಯಾಸ ಆಗಿದೆ ಅಲ್ವೇ…? ಗೀತೆಯ ಸಾಹಿತ್ಯ ಕೆಳಗಿನಂತಿದೆ.

    ನಿಶೆಯು ಸರಿದಿದೆ ಜಡತೆ ನೀಗಿದೆ
    ಉಷೆಯು ಗಾರುಡಿ ಬೀಸಿದೆ
    ಕ್ಲೇಶ ಕಳೆದಿದೆ ಆಸೆ ಫಲಿಸಿದೆ
    ಯಶವು ಕಾದಿದೆ ನಾಡಿಗೆ *(ಪಲ್ಲವಿ)*

    ಅಂದು ಯಜ್ಞಕೆ ಸಮಿಧೆಯಾದರು ದಾಸ ಶರಣರು ಸಂತರು
    ಇಂದು ಸೇವೆಯ ವ್ರತದಿ ಬದ್ಧರು ಕರ್ಮರಂಗದ ಧೀರರು
    ಸಂದ ಜಯವಿದು ಶುಭದ ಸೂಚನೆ ನನಸು ಸಾವಿರ ಕಲ್ಪನೆ
    ಕುಂದು ಕೊರತೆಯ ನೀಗಿ ವಿಶ್ವಕೆ ವಂದ್ಯರೆನಿಸಲು ಪ್ರೇರಣೆ
    (೧)

    ಅಂತರಂಗದಿ ಬೆಳಕು ಮೂಡಿದೆ ಕುಲದ ತರತಮ ತೊಲಗಿದೆ
    ಸ್ವಾರ್ಥ ಸುಳಿಯದ ಕಾರ್ಯಸಾಧನೆ ಹೃದಯ ಹೃದಯವ ಬೆಸೆದಿದೆ
    ಬಂಧು ಭಾವವು ಐಕ್ಯ ತಂದಿದೆ ಜಾತಿ ಗೋಡೆಯ ಕೆಡವಿದೆ
    ರಾಮ ಗುಹರ ಸ್ನೇಹ ಲೋಕಕೆ ನಿಜ ಸಮತ್ವವ ಸಾರಿದೆ
    (೨)

    ಧರ್ಮಪಥದಲಿ ದಿಟ್ಟತನದಲಿ ನಡೆವ ಯತ್ನವು ಸಾಗಿದೆ
    ಪುರುಷ ಯತ್ನಕೆ ದೈವ ಒಲಿದಿದೆ ಪರಮವೈಭವ ಕಾದಿದೆ
    ಒಂದೇ ಮನುಕುಲವೆಂಬ ಸೂತ್ರಕೆ ಹೊಸತು ಭಾಷ್ಯವು ಮೂಡಿದೆ
    ಮಂದಹಾಸದಿ ನಲಿವ ಮಾತೆಗೆ ಜಗವೇ ನಮನವ ಸಲ್ಲಿಸಿದೆ
    (೩)

Leave a Reply to Niranjan TP Cancel reply

Your email address will not be published. Required fields are marked *