ನಿಶೆಯು ಸರಿದಿದೆ ಜಡತೆ ನೀಗಿದೆ ಉಷೆಯು ಗಾರುಡಿ ಬೀಸಿದೆ
ಕ್ಲೇಶ ಕಳೆದಿದೆ ಆಸೆ ಫಲಿಸಿದೆ ಯಶವು ನಾಡಿಗೆ ಕಾದಿದೆ || ಪ ||
ಸಂದ ಜಯವಿದು ಶುಭದ ಸೂಚನೆ ನನಸು ಸಾವಿರ ಕಲ್ಪನೆ
ಕುಂದು ಕೊರತೆಯ ನೀಗಿ ವಿಶ್ವಕೆ ವಂದ್ಯರೆನಿಸಲು ಪ್ರೇರಣೆ || 1 ||
ಅಂದು ಯಜ್ಞಕೆ ಸಮಿಧೆಯಾದರು ದಾಸ ಶರಣರು ಸಂತರು
ಇಂದು ಸೇವೆಯ ವ್ರತದಿ ಬದ್ಧರು ಕರ್ಮರಂಗದ ಧೀರರು || 2 ||
ಬಂಧುಭಾವವು ಐಕ್ಯ ತಂದಿದೆ ಜಾತಿಗೋಡೆಯ ಕೆಡವಿದೆ
ಸ್ವಾರ್ಥ ಸುಳಿಯದ ಕಾರ್ಯಸಾಧನೆ ಹೃದಯ ಹೃದಯವ ಬೆಸೆದಿದೆ || 3 ||
ನೆಲೆಯನರಸಿದೆ ಅಂತರಾತ್ಮವು ಕುಲದ ತರತಮ ತೊಲಗಿದೆ
ರಾಮಗುಹರ ಸುಧಾಮ ಕೃಷ್ಣರ ಸ್ನೇಹ ಸತ್ಯವ ತಿಳಿಸಿದೆ || 4 ||
ಒಂದೆ ಮನುಕುಲವೆಂಬ ಸೂತ್ರಕೆ ಹೊಸತು ಭಾಷ್ಯವು ಮೂಡಿದೆ
ಮಂದಹಾಸದಿ ನಲಿವ ಮಾತೆಗೆ ಜಗವೇ ನಮನವ ಸಲಿಸಿದೆ || 5 ||