ಭಾರತಿಯು ಇರಬೇಕು ಅನುದಿನ
ಸಸ್ಯಸ್ಯಾಮಲೆಯಾಗುತ
ಹಸಿರು ಹೊನ್ನಿನ ಬೆಲೆಯನರಿಯಲಿ
ಜನತೆಯಾಗಲಿ ಜಾಗೃತ || ಪ ||
ತುಂಬಿ ನಿಲ್ಲಲಿ ತುಂಬ ಗಿಡಮರ
ಬಿಂಬಿಸಲಿ ವನಸಿರಿಯನು
ಕಂಪನೊಯ್ಯಲು ಪವನ, ಮಳೆಹನಿ
ತಂಪುಗೈಯಲಿ ನೆಲವನು || 1 ||
ಬೆಳೆಯು ಬೆಳೆಯಲಿ ಇಳೆಯು ಬೆಳಗಲಿ
ಕಳೆಯ ನಗುಮೊಗ ತೋರಲಿ
ಒಸರು ಹೊರಡಲಿ ಹಸಿರು ಹರಡಲಿ
ಹೊಸತು ಉಸಿರಲಿ ಹಾಡಲಿ || 2 ||
ಮರುಳು ಮಾಡುತ ವನವ ಕೆಡವುತ
ಮರಳುಗಾಡನು ತರುವರೇ?
ಮರಳಿಬಾರದು ಭೂಮಿ, ಅರಳದು
ತಿರುಳು ತೀರಲು, ತಿಳಿಯರೇ? || 3 ||
ಹಾಲು ನೀಡುವ ಹಸುವ ಕೆಚ್ಚಲು
ಕೊಯ್ದ ಗೊಲ್ಲನ ತೆರದಲಿ
ದುಡ್ಡಿನಾಸೆಗೆ ಹೆಡ್ಡತನದಲಿ
ಕಾಡು ಕಡಿವುದು ನಿಲ್ಲಲಿ || 4 ||
ರೋಗ ರುಜಿನವು ಹೆಚ್ಚುವುದು, ಬರ-
-ಗಾಲ ಬರುವುದು ನಾಡಿಗೆ
ನಾಶಗೊಳಿಸಲು ವೃಕ್ಷ ರಾಶಿಯ
ಆಶೆಯಿಲ್ಲವು ಬಾಳಿಗೆ || 5 ||
ಅಳಿದು ಹೋಗುವ ಪಕ್ಷಿ ಸಂಕುಲ
ಪ್ರಾಣ ವರ್ಗವು ಹೆಚ್ಚಲಿ
ಸಕಲ ಜೀವಿಗಳೊಂದೆ ಸರ್ವಸ-
-ಮಾನ ಭಾವನೆ ಹೊಮ್ಮಲಿ || 6 ||
ಬನ್ನಿ ರಕ್ಷಿಸಿ ಬೆಳೆದು ಕಾನನ
ಸೊಗದ ಬದುಕಿಗೆ ಸಾಧನ
ಧಾರುಣ ಯು ಮೈದುಂಬಿ ನಿಲ್ಲಲು
ಜೀವನವು ಬಲು ಪಾವನ || 7 ||