ವೇದದ್ರಷ್ಟ್ಯಸಮಾರಮ್ಭಾಂ ಪತಂಜಲಿಸುಮಧ್ಯಮಾಮ್ |
ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರುಪರಂಪರಾಮ್ ||
ವೇದಗಳ ದ್ರಷ್ಟ್ಯಗಳೆಂದು ಪ್ರಸಿದ್ಧರಾದ ಮಹರ್ಷಿಗಳಿಂದ ಆರಂಭಗೊಂಡು, ಆಚಾರ್ಯರವರೆಗೆ ಬಂದಿರುವ ಗುರುಪರಂಪರೆಯನ್ನು ವಂದಿಸುತ್ತೇನೆ.
ಭೂಯಾದ್ ಭವ್ಯಂ ಮಂಗಲಮಾಧ್ಯಾತ್ಮಿಕೇನ ಯೋಗೇನ |
ದೇಯಾದ್ ಯೋಗಿಜನೋ ಜನತಾಯೈ ಪರಮಾನಂದಂ ಯೋಗೇನ ||
ಭೂಮಿಯಲ್ಲಿ ಉತ್ಕೃಷ್ಟವಾದ ಮಂಗಳವು ಆಧ್ಯಾತ್ಮಿಕವಾದ ಯೋಗದಿಂದಾಗಿ ಉಂಟಾಗಲಿ. ಯೋಗಿಗಳು ಉನ್ನತವಾದ ಆನಂದವನ್ನು ತಮ್ಮ ಯೋಗದಿಂದ ಜನತೆಗೆ ನೀಡಲಿ.
ಜ್ಞಾನಂ ಭಕ್ತಿಂ ಕರ್ಮ ಪ್ರಾಪ್ಯ ಶ್ರೇಯೋವಂತೋ ರಾಜಂತಾಮ್ |
ಆಶ್ರಿತಸುರಾಜಯೋಗಾ ಧ್ಯಾನೇ ಮಗ್ನಾ ಲೋಕೇ ಭ್ರಾಜಂತಾಮ್ ||
ಜ್ಞಾನ ಭಕ್ತಿ ಹಾಗೂ ಕರ್ಮಗಳನ್ನು ಶ್ರೇಯೋವಂತರಾದವರು ಪಡೆದು ವಿರಾಜಿಸಲಿ. ರಾಜಯೋಗವನ್ನು ಆಶ್ರಯಿಸಿದ ಜನರು ಧ್ಯಾನದಲ್ಲಿ ಮಗ್ನರಾಗಿದ್ದುಕೊಂಡು ಎದ್ದು ಕಾಣಿಸುವಂತಾಗಲಿ.
ಯೋಗೋ ಜನನೀ ಯೋಗೋ ಜನಕೋ ಯೋಗೋ ಗುರುರಪಿ ಹಿತಕಾರೀ |
ಯೋಗೋ ಬಂಧುರ್ಯೋಗೋ ಮಿತ್ರಂ ಯೋಗೋsಸ್ಮಾಕಂ ಸರ್ವಸ್ವಮ್ ||
ಯೋಗವೇ ತಾಯಿ, ಯೋಗವೇ ತಂದೆ, ಯೋಗವೇ ಹಿತವನ್ನುಂಟು ಮಾಡುವ ಗುರು, ಯೋಗವೇ ಬಂಧು, ಯೋಗವೇ ಮಿತ್ರ, ನಮಗೆ ಎಲ್ಲವೂ ಯೋಗವೇ.
ಚರಮಂ ಲಕ್ಷ್ಯಂ ಕಿಮತಿ ಜ್ಞಾತುಂ ಕುತುಕಾದ್ ವಾಂಛಾಮೋ ಗೂಢಮ್ |
ಅತ್ರ ಪತಂಜಲಿರನುಗೃಹ್ಣಾತು ಪ್ರೀತ್ಯಾ ಮತ್ರ್ಯಾನ್ ನೋ ಬಾಢಮ್ ||
ಅಂತಿಮವಾದ ಹಾಗೂ ಗೂಢವಾದ ಲಕ್ಷ್ಯ ಯಾವುದೆಂದು ನಾವು ತಿಳಿಯಲು ನಾವು ಕುತೂಹಲದಿಂದ ತವಕ ಪಡುತ್ತೇವೆ. ಈ ವಿಷಯದಲ್ಲಿ (ಹುಟ್ಟು ಸಾವುಗಳಿಗೆ ಒಳಗಾಗುವ ಸಾಧಾರಣ) ಮನುಷ್ಯರಾದ ನಮ್ಮನ್ನು ಪತಂಜಲಿಯು ಪ್ರೀತಿಯಿಂದ ಖಂಡಿತ ಅನುಗ್ರಹಿಸಲಿ.
ವಸುಧೈವ ಕುಟುಂಬಕಮಿತಿ ಭಾವೋ ಭೂಯಾಲ್ಲೋಕೇ ಸರ್ವತ್ರ |
ಅನುಭೂತೋನ್ನತಚಿಂತನಪಾಕೇ ಧೂತಸಮಸ್ತಾಂತರಶೋಕೇ ||
ಉನ್ನತವಾದ ಚಿಂತನೆಯ ಪರಿಣಾಮವನ್ನನುಭವಿಸುವ ಹಾಗೂ ಅಂತರಂಗದ ಸಮಸ್ತಶೋಕಗಳನ್ನೂ ಕೆಡವಿ ಹಾಕಿರುವ ಜನರಲ್ಲಿ, ಭೂಮಿಯೆಲ್ಲಾ ಒಂದೇ ಕುಟುಂಬವೆಂಬ ಭಾವನೆಯು ಯೋಗದ ಕಾರಣದಿಂದಾಗಿ ಉಂಟಾಗಲಿ.
ಯೋಗೋ ಯೋsಪಿ ಚ ಕೋsಪಿ ಚ ಭವತು ಜ್ಞಾನಂ ಸೃಜತಾದುತ್ತುಂಗಮ್ |
ವಿಶ್ವಂ ನಿಖಿಲಂ ಯೋಗಮಯಂ ಸದ್ ಭೂಯಾದ್ ದುರ್ಮಾರ್ಗೈರ್ಮುಕ್ತಮ್ ||
ಯೋಗವು ಯಾವುದೆ ಇರಲಿ (ಮಂತ್ರಯೋಗ, ರಾಜಯೋಗ, ಹಠಯೋಗ, ಲಯಯೋಗ ಇತ್ಯಾದಿ), ಅದು ಮೇಲ್ಮಟ್ಟದ ಜ್ಞಾನವನ್ನುಂಟು ಮಾಡಲಿ. ಸಮಸ್ತ ವಿಶ್ವವೂ ಯೋಗಮಯವಾಗಿದ್ದು ಕೆಟ್ಟ ದಾರಿಗಳಿಂದ ಮುಕ್ತವಾಗಿರಲಿ.