ವಿನಮ್ರ ಭಾವದಿ ವಂದನೆ ಸಲಿಸುತ

ವಿನಮ್ರ ಭಾವದಿ ವಂದನೆ ಸಲಿಸುತ
ಗೈಯುವ ಈ ದಿನ ಶ್ರೀಗುರುಪೂಜನ || ಪ ||

ಉಜ್ವಲವೆಮ್ಮದು ಆರ್ಯಸಂಸ್ಕೃತಿ
ಸಾರುತಲಿದೆ ಧ್ವಜ ಅದರದೆ ಕೀರ್ತಿ
ಭಗವಾಧ್ವಜವಿದು ಗುರುಭಾರತಿ
ಭಾರತಸಂತಾನಕೆ ಶುಭಭೂಷಣ || 1 ||

ತ್ಯಾಗ ತಪಸ್ಯಾ ವೈಭವ ಶೋಭಿತ
ವಿಜಯ ಪರಾಕ್ರಮಗಳ ಸಂಕೇತ
ಕ್ರಾಂತಿಯ ಶಾಂತಿಯ ಕೂಡಿಸಿದಂತಿದೆ
ಧ್ವಜದಲಿ ಭಗವಾವರ್ಣದ ಮಿಲನ || 2 ||

ರಾಷ್ಟ್ರದ ಸೇವೆಗೆ ತ್ಯಾಗವ ಗೈಯುವ
ವೈಭವ ಶಿಖರಕೆ ರಾಷ್ಟ್ರವನೊಯ್ಯುವ
ಹಾರುತ ಮೆರೆಯಲಿ ಧ್ವಜವಿದು ಭಗವಾ
ನೀಡುತ ಲೋಕಕೆ ಮಹಾನ ಬೋಧನ || 3 ||

ವ್ಯಕ್ತಿ ವ್ಯಕ್ತಿಯ ಹೂಗಳ ಜೋಡಿಸಿ
ಸಮಷ್ಟಿರೂಪದ ಮಾಲೆಯ ಅರ್ಪಿಸಿ
ಭಕ್ತಿಯ ದೀವಿಗೆ ಹೃದಯದೊಳುರಿಯುತ
ಪ್ರಭೆಯನು ಬೀರುತಲಿರಲಿ ಚಿರಂತನ || 4 ||

ಸಾಧಿಸುತಲಿ ಭಾರತಮಾತೆಯ ಹಿತ
ದೇಹವ ಶ್ರೀಗಂಧದವೊಲು ತೇಯುತ
ತನುಮನಧನಗಳ ಪೂರ್ಣ ಸಮರ್ಪಣೆ
ಅಹುದದು ಗುರುವಿಗೆ ಸಾರ್ಥಕ ದಕ್ಷಿಣೆ || 5 ||

Leave a Reply

Your email address will not be published. Required fields are marked *

*

code