ವಂದಿಪೆನು ಈ ಭೂಮಿಗೆ

ವಂದಿಪೆನು ಈ ಭೂಮಿಗೆ ನಮನ ಭಾರತ ಮಾತೆಗೆ || ಪ ||

ಹರನ ಹೊತ್ತಿಹ ಹಿರಿಯ ಗಿರಿಯಿದು ಹಿಮದ ಹೂವಿನ ಹಂದರ
ಮೂರುಸಾಗರ ಮಿಲನಗೊಂಡಿಹ ಮಹಿಮೆಯಾಂತಿಹ ಮಂದಿರ
ತೊದಲುನುಡಿಗಳ ತಪ್ಪುತಿದ್ದುತ ತತ್ವತೋರಿದ ತಾಯಿಗೆ
ಮಡಿಲ ಮಕ್ಕಳಿಗೆಲ್ಲ ಮಮತೆಯ ಮಧುವನುಣಿಸಿದ ಮಾತೆಗೆ || 1 ||

ತರಳರೆಲ್ಲರ ತಮವ ತೊಳೆಯುವ ತೀರ್ಥತೊರೆಗಳ ತಾಣವು
ಉನ್ನತಿಯ ಉತ್ತುಂಗಕೇರಿದ ಉತ್ತಮರ ಉದ್ಯಾನವು
ಸಪ್ತಸಾಗರ ಸುತ್ತಿಸುಳಿದಿಹ ಸಂಸ್ಕೃತಿಯ ಸಿರಿಸೌರಭ
ಧರೆಗೆ ದಾರಿಯ ದೀಪದಂತಿಹ ದಿವ್ಯದರ್ಶನ ದುರ್ಲಭ || 2 ||

ಶಮನಗೊಳ್ಳದು ಶೌರ್ಯದಾರ್ಭಟ ಶತ್ರುವನು ಸದೆಬಡಿಯದೆ
ವೀರವೃಂದದ ವೀರಗರ್ಜನೆ ವಿಜಯವನಿತೆಯ ವರಿಸದೆ
ಬಾಹುಬಾಹುಗಳಲ್ಲಿ ಬೆಳೆಸುತ ಭೀಮಭಾರ್ಗವ ಬಲವನು
ಭೇದಭಾವವ ಬಿಸುಟು ಬೀರುತ ಭುವಿಗೆ ಭಾಗ್ಯದ ಬೆಳಕನು || 3 ||

ಕಷ್ಟ ಕೋಟಲೆ ಕೋಟಿ ಇದ್ದರು ಕಾರ್ಯಕ್ಷೇತ್ರದ ಕೋರಿಕೆ
ತೀರಿಸದೆ ತನುತೆರಳದೆಂದಿಗು ತನ್ನತನವನು ತೋರದೆ
ಪ್ರಕಟಗೊಂಡಿದೆ ಪ್ರಗತಿ ಪಥದಲಿ ಪ್ರಥಮತೆಯ ಪ್ರೇರೇಪಣೆ
ಭಗವೆಯಡಿಯಲಿ ಬಾನುಭುವಿಯನು ಬೆಸೆವ ಬೃಹದಾಯೋಜನೆ || 4 ||

One thought on “ವಂದಿಪೆನು ಈ ಭೂಮಿಗೆ

Leave a Reply to SURESH N Cancel reply

Your email address will not be published. Required fields are marked *