ವಾದಗಳ ಸೆರೆ ಬಿಡಿಸಿ, ಭೇದಗಳ ತೆರೆ ಸರಿಸಿ
ತೆರೆದುಬಿಡು ಹೃದಯದ್ವಾರ, ಬರಲಿ ಬಿಡು ಕದಿರ ನೇರ || ಪ ||
ಹಳ್ಳಿಹಳ್ಳಿಯ ಬದಿಯ, ಹಳ್ಳಕೊಳ್ಳವೆ ಯಮುನೆ
ಜೀವನದಿಯಾದಾಳು, ಭಾವಜಲವೆರೆದಾಗ
ದನಗಾಹಿ ಬಾಲಕರು, ರಾಷ್ಟ್ರರಥ ಚಾಲಕರು
ಆದಾರು ಬೆಳೆದಾರು ಧ್ಯೇಯಜಲವೆರೆದಾಗ || 1 ||
ತರುಣಗಣ ತಲೆ ಎತ್ತಿ ನಿಂತಾಗ ತೋಳೆತ್ತಿ
ಬೆಟ್ಟಬೆಟ್ಟವನೆತ್ತಿ ಸಹ್ಯಾದ್ರಿ ಮೈ ಎತ್ತಿ
ಇರುಳಕೋಟೆಯು ಕರಗಿ ಮೂಡುವನು ವಿಜಯರವಿ
ಹಾಡುವನು ಜಯಗಾನ ಚಿರವಿಹಾರಿ ಸಮೀರ || 2 ||
ಮೈಮರೆತ ಮಾನವರ ಮಣ್ಣುಗೊಂಬೆಯ ಹಿಡಿದು
ನಾಡಿನಾಡಿಯ ಮಿಡಿದು ಜೀವರಾಗವ ತುಡಿದು
ಅಸುರಬಲ ಸದೆಬಡಿದು, ಶುಭ ನವೋದಯ ಗಳಿಸೆ
ಶಾಲಿವಾಹನರೆಲ್ಲ ನಿಲಬೇಕು ಸಾಕಾರ || 3 ||