ಉಷೆ ಯಶವ ಗಳಿಸಿಹಳು

ಉಷೆ ಯಶವ ಗಳಿಸಿಹಳು ನಿಶೆ ಕುಸಿದು ಕುಳಿತಿಹಳು
ಮೂಡಣದ ಆಗಸದಿ ಕೆಂಪೇರಿದೆ
ಹೊಸ ಕುಸುಮವರಳುತಿರೆ ನಸು ನಗುವ ಬೀರುತಿರೆ
ನಸುಕಿನಲೆ ಅಂಗಳದಿ ಕಂಪೇರಿದೆ || ಪ ||

ಅರಳಿರುವ ಸುಮದಲಿಹ ಅಂದ ಮಕರಂದಗಳು
ಸ್ನೇಹದೊಸಗೆಯನಿತ್ತು ಬಳಿ ಕರೆದಿವೆ
ಚಿಗುರೆಲೆಯ ಮರೆಯಿಂದ ಕೇಳುತಿಹ ಕೂಜನದಿ
ಲೋಕಹಿತದಾಶಯವು ಮರುದನಿಸಿದೆ || 1 ||

ಚರಿತೆಯೊಡಲಿಗೆ ಸರಿದ ಇರುಳ ಕಗ್ಗತ್ತಲೆಯ
ಕಹಿಗನಸು ನೋವುಗಳ ಕೊನೆಯಾಗಿವೆ
ಮೇಲೆದ್ದು ಕೊಳೆ ತೊಳೆದು ಮಡಿಯಾದ ಯುವಜನತೆ
ಧ್ಯೇಯ ತಿಲಕವ ಧರಿಸಿ ಅಣಿಯಾಗಿದೆ || 2 ||

ಪ್ಲವದ ವಿಪ್ಲವವಳಿದು ಶುಭಕ್ರತುವಿನಾಗಮನ
ಉಲ್ಲಾಸ ವಲ್ಲರಿಯು ಪಲ್ಲವಿಸಿದೆ
ಗೆಲ್ಲಬಲ್ಲೆವು ಜಗವ ಸೋಲನೊಲ್ಲೆವು ಎಂಬ
ಪಲ್ಲವಿಯು ಜನ ಮನದಿ ಮರುದನಿಸಿದೆ || 3 ||

ಹೊಸಯುಗದಿ ಹೊಸ ಜಗವ ರೂಪಿಸುವ ಸಂಕಲ್ಪ
ಜನರೆದೆಯ ಭಿತ್ತಿಯಲಿ ತಾನರಳಿದೆ
ಇತಿಹಾಸದನುಭವದ ಆಧಾರದಲಿ ಜನತೆ
ಹೊಸಯಶದ ಹಾದಿಯಲಿ ಮುನ್ನಡೆದಿದೆ || 4 ||

Leave a Reply

Your email address will not be published. Required fields are marked *