ಉದಯವಾಗಲಿ ನಮ್ಮ ವೈಭವದ ಸಿರಿನಾಡು

ಉದಯವಾಗಲಿ ನಮ್ಮ ವೈಭವದ ಸಿರಿನಾಡು
ಮುದದಿ ಸೌಭಾಗ್ಯದಾ ರಾಮರಾಜ್ಯದ ಬೀಡು || ಪ ||

ಪರಿಪರಿಯ ವಿಜ್ಞಾನ ಫಲಪುಷ್ಪ ಧನ ಧಾನ್ಯ
ಆರೋಗ್ಯ ದೀರ್ಘಾಯು ಸತ್ಯಶಾಂತಿಯ ನಾಡು
ವರಶಿಲ್ಪ ಚಿತ್ರಕಲೆ ಸಾಹಿತ್ಯ ಸಂಗೀತ ನೆಲೆ
ನಿರುತವಧ್ಯಾತ್ಮ ಸುಖ ಸೌಖ್ಯದಾ ನೆಲೆವೀಡು || 1 ||

ತ್ಯಾಗಮಯ ಜೀವನವೇ ರಾಗಾರುಣೋದಯ
ಸೌಗುಣ್ಯ ತಂಗಾಳಿ ತೀಡುತಿಹ ಶುಭಕಾಲ
ಬೇಗ ಮುಸುಕುವ ನಿಶೆಯ ತೆರದೊಳವಿವೇಕವ
ನೀಗಾಡಿ ಸುಜ್ಞಾನ ರವಿಯ ಮೂಡುವ ಕಾಲ || 2 ||

ಗೀತೆಯೆಂಬಾಮೃತವನುಣಿಸಿದಾ ಮಾಧವನ
ಇತಿಹಾಸ ಬೆಳಗಿದಾ ವಿಕ್ರಮನ ಶಿವನೃಪನ
ಅತಿಶಯ ತ್ಯಾಗಮೂರ್ತಿಯ ಕೇಶವನ ತೆರದಿ
ಸತತ ಶಾಂತಿಯ ಕುಲವು ತುಂಬಿ ತುಳುಕುವ ನಾಡು || 3 ||

ಜಗಕೆ ಸತಿಧರ್ಮವನು ಸಾರಿ ತೋರಿದ ನಾಡು
ನಿಗಮಾಗಮಾದಿಯಿಂದೆಸೆದು ಬೆಳಗಿದ ನಾಡು
ಮಿಗಿಲಾಗಿ ಸತ್ಯ ಸಂಸ್ಕೃತಿಗೆ  ಸೆಲೆ ತಾಯ್ನಾಡು
ಭಗವಾದ್ವಜವನೆತ್ತಿ ನಲಿವ ಭಾರತ ನಾಡು || 4 ||

Leave a Reply

Your email address will not be published. Required fields are marked *

*

code