ಸ್ವರ್ಗಕಿಂತ ಮೇಲು ಜನನಿ ಜನ್ಮಭೂಮಿ ಭಾರತ
ವರದೆ ಕಾಯೆ ತಾಯೆ ಇರಲಿ ಒಲವು ರಕ್ಷೆ ಶಾಶ್ವತ || ಪ ||
ಏರಿ ನಿಂತ ಮೇರು ಗಿರಿಯ ಪಡೆಯು ಗಿರಿಯ ಕಾಯಲು
ಮೀರಿ ಮೊರೆವ ಕಡಲು ಮಣಿದು ನಿಂದು ಪಾದ ತೊಳೆಯಲು
ಮೆರೆದ ಹಸಿರು ನರ್ತನ – ಮೆರೆಯೆ ದಿವ್ಯದರ್ಶನ || 1 ||
ಪುಣ್ಯಜಲವ ಹೀರಿ ಫಲವ ನೀಡಿ ನೆಲವು ಪಾವನ
ವರ್ಷಧಾರೆ ಸುರಿದು ಬೆಳೆದು ಮಧುರ ಗಂಧ ಕಾನನ
ಕುಣಿವ ಝರಿಯ ವೈಖರಿ – ಕಾಣ ಸಿಗದು ಈ ಪರಿ || 2 ||
ಒಡಲಲಿರುವ ಚಿನ್ನ, ರನ್ನ, ನಿಧಿಯ ನೀಡೆ ನಿಂತಿದೆ
ಕಾಡಿ ಬೇಡಿದ ವರವ ಕೊಡ ಮಡಿಲಲಿಟ್ಟು ತೂಗಿದೆ
ಪ್ರೀತಿ ನೀತಿ ವಾರಿಧಿ – ದೇವಿ ನಿನ್ನ ಸನ್ನಿಧಿ || 3 ||
ಜಗವ ಬೆರಗುಗೊಳಿಸಿದಂಥ ಕಲೆಯ ಬಲೆಯ ಆಗರ
ಸಂತ ಋಷಿಯ ದಿವ್ಯವಾಣಿ ಮೊಳಗಿ ಜ್ಞಾನ ಸಾಗರ
ಸತ್ಯ ಶಾಂತಿ ಧಾಮವು – ಧನ್ಯವೆನ್ನ ಜನ್ಮವು || 4 ||