ಸ್ವರ್ಗದ ಸೊಬಗನು ಮೀರಿಸಿ ಮೆರೆದಿಹ

ಸ್ವರ್ಗದ ಸೊಬಗನು ಮೀರಿಸಿ ಮೆರೆದಿಹ ಭಾರತದ ಅಂಗಳದಲ್ಲಿ
ಕೇಶವ ಉರಿಸಿದ ಸಂಘದ ಹಣತೆಯು ಬೆಳಗಿತು ಜನಮನ ಮನದಲ್ಲಿ || ಪ ||

ತನ್ನೀ ನೆಲಜಲ ಧರ್ಮಸಂಸ್ಕೃತಿ ಹಿಂದೂ ಜನತೆಯು ಮರೆತಿರಲು
ದಾಸ್ಯದ ಉರುಳಿಗೆ ಕೊರಳನು ನೀಡಿ ಸ್ವಾರ್ಥದ ಕೂಪದಿ ಮುಳುಗಿರಲು
ಘೋರ ನಿರಾಶೆಯ ಘನ ತಿಮಿರದಿ ತಾ ಯುವ ಜನತೆಯು ಎದೆಗುಂದಿರಲು
ಕೇಶವ ತೋರಿದ ಧ್ಯೇಯದ ಗಾದಿ ಅಂತಿಮ ವಿಜಯದ ಹಾದಿಯೊಳು
ಮಾತೆಯ ಸೇವೆಯ ಅನುದಿನ ಮಾಡಲು ಜೀವನವನೆ ಮುಡಿಪಾಗಿಡಲು || 1 ||

ಭಾರತದೇಶದ ಭವ್ಯಪರಂಪರೆ ಜಗದಲ್ಲಿದು ಮಹಿಮಾನ್ವಿತವು
ವೀರ ಸುಪುತ್ರರ ಸಾಹಸ ಚರಿತೆಯು ಶೌರ್ಯಪ್ರತಾಪ ಗುಣಾನ್ವಿತವು
ಅಗಣಿತ ಋಷಿಮುನಿ ಸಂತರ ನಾಡಿದು ಅನುಪಮ ಕಲೆಗಳ ನೆಲೆವೀಡು
ಎಮ್ಮಯ ಹೆಮ್ಮೆಯ ಹಿಂದುಸ್ಥಾನ ಯುಗಯುಗದ ಅಭಿಮಾನವಿದು
ಸಂಘದ ಮಂತ್ರವ ಪಠಿಸುತ ನಾಡೊಳು ಐಕ್ಯದ ಆರತಿ ಬೆಳಗಿಸಲು || 2 ||

ಹಿಂದುತ್ವದ ಸಿಹಿ ಅಮೃತ ಉಣಿಸಿದ ದೈವಿಕ ಮೂರ್ತಿ ಕೇಶವನೇ
ಬಂಧುತ್ವದ ಸುಧೆ ನಾಡಲಿ ಹರಿಸಿದೆ ಮುನಿಪುಂಗವ ಹೇ ಮಾಧವನೇ
ಹಾಲಾಹಲವನು ನುಂಗುತ ನಗುತಲಿ ಮಾತೆಯ ಕಣ್ಣೀರೊರೆಸುತಲಿ
ಬೆಳೆದಿರಿ ಎತ್ತರ ಎತ್ತರ ನೀವು ಮುಗಿಲಿನ ಮೇರೆಯ ಮೀರುತಲಿ
ಧನ್ಯವು ನಿಮ್ಮಯ ಜೀವನ ಋಷಿವರ ಹೆಸರೆಂದಿಗು ಅಜರಾಮರವು || 3 ||

Leave a Reply

Your email address will not be published. Required fields are marked *

*

code