ಸುರನದಿಯನು ಧರೆಗಿಳಿಸಿದ ಧೀರನ ವಾರಸುದಾರರು ನಾವು
ಸೋಲನೆ ಗೆಲುವಿನ ಸಾಧನಗೊಳಿಸುವ ಸಾಹಸಗಾರರು ನಾವು
ಭಾರತವೀರರು ನಾವು… ನವಭಾರತ ವೀರರು ನಾವು || ಪ ||
ಅಡಿಗಡಿಗೆದುರಾಗಿಹ ಅಡೆತಡೆಗಳ
ಅಡಿಯಿಂದಲೆ ಕಿತ್ತೆಸೆಯುವೆವು
ನಾಡಿನ ಗಡಿಗೌರವ ರಕ್ಷಣೆಗೆ
ಪ್ರಾಣವನೇ ಮುಡಿಪಿರಿಸುವೆವು || 1 ||
ಸ್ವಂತದ ಚಿಂತನೆಗಳನು ಬದಿಗಿರಿಸಿ
ರಾಷ್ಟ್ರದ ಚಿಂತನೆ ಮಾಡುವೆವು
ಕಠಿಣ ಸವಾಲುಗಳನು ಸ್ವೀಕರಿಸಿ
ದೇಶದ ಹಿತ ಕಾಪಾಡುವೆವು || 2 ||
ನಮ್ಮಯ ಜನರೇ ಸುಮ್ಮನೆ ನಿಂದಿಸಿ
ಹುಸಿ ಅಪವಾದವ ಹೊರಿಸಿರಲು
ಅಗ್ನಿಪರೀಕ್ಷೆಗೆ ಒಳಗಾಗಿಹೆವು
ಮಿಥ್ಯೆಗಳಿಂದಲಿ ಹೊರಬರಲು || 3 ||
ಕೇಶವ ಕಂಡಿಹ ಕನಸುಗಳೆಲ್ಲವ
ಶೀಘ್ರದಲಿ ನನಸಾಗಿಸಲು
ಮುನ್ನಡೆವೆವು ಕ್ಷಣಮಾತ್ರವು ನಿಲ್ಲದೆ
ಪರಮವೈಭವವ ಸಾಧಿಸಲು || 4 ||