ಸತ್ಪಥ ದೃಢವ್ರತಗಳ ಪೋಷಣೆಗೆ

ಸತ್ಪಥ ದೃಢವ್ರತಗಳ ಪೋಷಣೆಗೆ
ಜೀವನ ಬೆಳಗುವ ಪರಿವರ್ತನೆ
ಸಕಾಲವೀ ಸಂಕ್ರಾಂತಿಯ ಘಳಿಗೆ || ಪ ||

ಚೇತನಹೀನತೆ ಆಶಾಶೂನ್ಯತೆ ಸೀಳಿ
ಬೀಸಿದೆ ಶುಭಕ್ರಾಂತಿಯ ಸವಿಗಾಳಿ
ರವಿಸಂಚಾರದಿ ಬೆಳೆಯುವ ಬೆಳಕಿನ ಹರಕೆ
ಪಾವನವೀ ಸಂಕ್ರಾಂತಿಯ ದಿನಕೆ || 1 ||

ಕುಗ್ಗುವ ಅಜ್ಞಾನದ ತಿಮಿರದ ಹೆಗ್ಗಡಲು
ಚದುರೋಡುವ ಕೆಡುಕಿನ ಕಾರ್ಮುಗಿಲು
ಸಗ್ಗದ ಪಥ ಉತ್ತರಾಯನವು ತೆರೆದವೊಲು
ಹಿರಿಹಿಗ್ಗಿದೆ ಸುಜ್ಞಾನದ ಹಗಲು || 2 ||

ಜಡತೆಯನಾಂತಿಹ ಸೃಷ್ಟಿಗೆ ದೃಷ್ಟಿಯ ನೀಡಿ
ಯಶಪ್ರಾಪ್ತಿಗೆ ಹೊಸ ದಾರಿಯ ಮಾಡಿ
ತಿಮಿರವಿನಾಶದ ಋಜುವಿಜಯದ ಘನಘೋಷ
ಅಹುದದೆ ಸಂಕ್ರಾಂತಿಯ ಸಂದೇಶ || 3 ||

ಧ್ಯೇಯಾರುಣನ ನವೋದಯ ಬೆಳಕನು ಹರಿಸಿ
ನತಹೃತ್ಕಮಲವ ವಿಕಸಿತಗೊಳಿಸಿ
ಜ್ವಲಂತ ಜೀವನದಾದರ್ಶವಿದೋ ಜಗಕೆ
ಆಶಾಮೃತ ತುಂಬಲಿ ಜನಮನಕೆ || 4 ||

Leave a Reply

Your email address will not be published. Required fields are marked *

*

code