ಸಾಟಿ ಇಲ್ಲದ ಸಂತ ನಿನಗೆ ಕೋಟಿ ಕೋಟಿ ವಂದನೆ
ಹುಟ್ಟಿ ಬಾರೊ ಮತ್ತೆ ನೀನು ಸಕಲ ವಿಶ್ವವಂದ್ಯನೆ
ನೋವ ಸಹಿಸಲಾರೆವು… ನಿನ್ನ ಮರೆಯಲಾರೆವು || ಅ.ಪ ||
ಪ್ರಾಂತಜಾತಿ ಪಂಥ ಪಕ್ಷ ಸೀಮೆಗಳನು ದಾಟಿದೆ
ಭಾರತೀಯರೆದೆಯ ಹೃದಯ ತಂತಿಗಳನು ಮೀಟಿದೆ
ಸಂಕುಚಿತತೆ ಮೀರಿ ನಿಂತ ತ್ಯಾಗಭರಿತ ಜೀವನ
ಕಾರ್ಯನಿರತ ಸ್ಫೂರ್ತಿಭರಿತ ನಿನ್ನ ಬದುಕು ಪಾವನ || 1 ||
ರಾಜಕೀಯ ನೆಪಕೆ ಮಾತ್ರ ರಾಜಧರ್ಮ ಪಾಲಕ
ಸತತ ನಾಡ ಸೇವೆ ಗೈದ ನೈಜ ರಾಷ್ಟ್ರಸೇವಕ
ಶೂನ್ಯದಿಂದ ಭವ್ಯಸೃಷ್ಟಿ ಗೈದ ದಿವ್ಯಮಾಂತ್ರಿಕ
ಹಂತಹಂತವಾಗಿ ಶಿಖರವೇರಿ ನಿಂತ ಸಾಧಕ || 2 ||
ದ್ವೇಷಭರಿತ ಅರಿಗಳೆಡೆಗೆ ಸ್ನೇಹ ಹಸ್ತಚಾಚಿದೆ
ಹಗೆಯ ಹೊಗೆಯ ಧಗೆಯ ತಣಿಸಿ ಶತ್ರುಗಳನು ಮಣಿಸಿದೆ
ದುಷ್ಟರಿಗೆ ಕಠೋರಿಯಾಗಿ ಶಿಷ್ಟರಿಗೆ ಉದಾರಿಯಾಗಿ
ಅಭ್ಯುದಯಕೆ ನಾಂದಿ ಹಾಡಿ ನೀನು ದೂರ ತೆರಳಿದೆ || 3 ||
(ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರು ವಿಧಿವಶರಾದಾಗ ಬರೆದ ಶ್ರದ್ಧಾಂಜಲಿ ಗೀತೆ)