ಸಂಕಟದಾ ಕರಿಮೋಡದ ಛಾಯೆಯು (ದೃಢಸಂಕಲ್ಪವ ಮಾಡೋಣ)

ಸಂಕಟದಾ ಕರಿಮೋಡದ ಛಾಯೆಯು ವ್ಯಾಪಿಸಿದೆ ನಮ್ಮೆಲ್ಲರನೂ
ಪೂರ್ಣಶಕ್ತಿಯಲಿ ದುಃಖವನಳಿಸುವ ದೃಢಸಂಕಲ್ಪವ ಮಾಡೋಣ || ಪ ||

ಈ ಸಂಘವು ಎಲ್ಲಿಯವರೆಗೋ ತಿಳಿಯದಾಗಿದೆ ನಮಗಿಂದು
ಏನೇ ಇರಲಿ ಹೇಗೇ ಇರಲಿ ನಮ್ಮಯ ಗುರಿಯು ದಿಟವಿಂದು
ಸಕ್ರಿಯರಾಗಿ ಶ್ರಮಿಸುವ ವ್ರತವನು ಸ್ವೀಕರಿಸುತ ಮುನ್ನಡೆಯೋಣ
ಪೂರ್ಣಶಕ್ತಿಯಲಿ ದುಃಖವನಳಿಸುವ ದೃಢಸಂಕಲ್ಪವ ಮಾಡೋಣ || 1 ||

ಭೇಟಿಯು ಇಲ್ಲ ಕೂಟವು ಇಲ್ಲ, ಆದರೂ ಸ್ನೇಹವನರಳಿಸುವಾ
ಧೈರ್ಯವ ತುಂಬುತ ಪ್ರೀತಿಯ ತೋರಿ ದೈನ್ಯ ನಿರಾಸೆಯ ನೀಗಿಸುವಾ
ದುಃಖಿತ ಪೀಡಿತ ಬಂಧುಬಾಂಧವರ ಸೇವೆಯ ನಾವು ಗೈಯೋಣ
ಪೂರ್ಣಶಕ್ತಿಯಲಿ ದುಃಖವನಳಿಸುವ ದೃಢಸಂಕಲ್ಪವ ಮಾಡೋಣ || 2 ||

ಹಸಿವೆ ನೀರಡಿಕೆ ಅರಿವೆಯ ಚಿಂತೆ ಯಾರಿಗು ಎಂದಿಗು ಬರದಿರಲಿ
ಸ್ನೇಹ ಪ್ರೇಮಗಳ ಸುಧೆಯನು ಹರಿಸಿ ಆಸೆಯು ಚಿಗುರಲಿ ಮನದಲ್ಲಿ
ಭರವಸೆ ಮೂಡಿಸಿ ಪ್ರತಿಮನದಲ್ಲಿ ಭೀತಿಯ ಕತ್ತಲೆ ಕಳೆಯೋಣ
ಪೂರ್ಣಶಕ್ತಿಯಲಿ ದುಃಖವನಳಿಸುವ ದೃಢಸಂಕಲ್ಪವ ಮಾಡೋಣ || 3 ||

ದೇವರ ದಯವೂ ಋಷಿಮುನಿ ವರವು ನಮಗಿರೆ ಇನ್ನೆಲ್ಲಿಯ ಭಯವು
ಜಗ್ಗದೆ ಕುಗ್ಗದೆ ನಮ್ಮೀ ಪಯಣದಿ ಮುಂದಡಿಯಿಡುತಲಿ ಸಾಗುವೆವು
ನಿಲ್ಲದೆ ಸಾಗುತ ಗುರಿಯನು ತಲುಪುವ ನಿಶ್ಚಯವನ್ನು ಮಾಡೋಣ
ಪೂರ್ಣಶಕ್ತಿಯಲಿ ದುಃಖವನಳಿಸುವ ದೃಢಸಂಕಲ್ಪವ ಮಾಡೋಣ || 4 ||

Leave a Reply

Your email address will not be published. Required fields are marked *

*

code