ಸಂಘಾಷ್ಟಕ – ಕನ್ನಡ – ಕಡಲೊಡೆಯ ಪದತೊಳೆವ

ಸಂಘಾಷ್ಟಕ

ಕಡಲೊಡೆಯ ಪದತೊಳೆವ ಈ ಪುಣ್ಯಭೂಮಿ
ಹಿಮನಗವು ಶೋಭಿಸುವ ಈ ದೇವಭೂಮಿ
ಹಿಂದುಭೂಮಿಯ ಪದದಿ ಮೂಜಗವೂ ಮಣಿಯೆ
ಅನುದಿನವೂ ಜಪಿಸೋಣ ಸಂಘಮಂತ್ರ || 1 ||

ಜಗದ ಗುರು ತಾನಾಗಿ ವಂದನೆಯ ಗಳಿಸಿ
ಚಂದದಿಂದಲಿ ಬೆಳಕಿತ್ತುದೀ ಹಿಂದುರಾಷ್ಟ್ರ
ನಂದದೆಯೇ ಮುಂದರಿಯಲೀ ನಂದಾದೀಪ
ಒಂದಾಗಿ ಜಪಿಸೋಣ ಸಂಘಮಂತ್ರ || 2 ||

ಕರಪಿಡಿದು ತಾಯ್ತನವ ಮೆರೆದಿರುವ ನಾಡು
ನರಳಾಡಿ ಮರುಗುತಿಹ ಪರಿಯೊಮ್ಮೆ ನೋಡು
ಈ ದುಃಖದಿಂದವಳ ಮೇಲೆತ್ತಲೆಂದೇ
ಪ್ರತಿದಿನವೂ ಜಪಿಸೋಣ ಸಂಘಮಂತ್ರ || 3 ||

ನಿಂದಿತರು ಪತಿತರಲಿ ಛಲಬಲವ ತುಂಬಿ
ಸಂಘಶಕ್ತಿಯ ದಿವ್ಯ ತೇಜವನು ನಂಬಿ
ಕುಂದು ಕೊರತೆಯ ನೀಗಿ ಆತ್ಮ ಬಲತುಂಬಿ
ಒಂದಾಗಿ ಹೇಳೊಣ ಸಂಘಮಂತ್ರ || 4 ||

ಮಾನಾಪಮಾನಗಳ ಮೀರಿ ನಿಲಲೆಂದು
ಹಾರವೋ ಶೂಲವೋ ಸರಿಸಮವದೆಂದು
ಹಿಗ್ಗದೆಯೆ ಕುಗ್ಗದೆಯೆ ಮುನ್ನಡೆಯಲೆಂದು
ಜಗ್ಗದೆಯೆ ಜಪಿಸೋಣ ಸಂಘಮಂತ್ರ || 5 ||

ಒಡಗೂಡಿ ಬಂದವರು ಬಿಟ್ಟೋಡಬಹುದು
ಸವಿನುಡಿಯ ಗೆಳೆಯರೇ ಹೀಗಳೆಯಬಹುದು
ಬಂಧುಗಳು ನಿಂದಿಸುತ ಹಿಂದೆಳೆಯಬಹುದು
ಆದರೂ ಬಿಡಲುಂಟೆ ಸಂಘಮಂತ್ರ || 6 ||

ಭಕ್ತಿ ಗೌರವ ಸಹಿತ ಗುರು ಭಗವೆಯಡಿಗೆ
ಶಿರವಿಟ್ಟು ಸ್ವೀಕರಿಸಿದಾ ಶ್ರೇಷ್ಠವ್ರತವ
ಪ್ರಾಣವನು ಪಣಕಿಟ್ಟು ಪರಿರಕ್ಷಿಸಲ್ಕೆ
ಜಪಿಸೋಣ ಪ್ರೇರಕವು ಈ ದಿವ್ಯಮಂತ್ರ || 7 ||

ಈ ತನುವು ಬಲವುಡುಗಿ ಬಿದ್ದು ಹೋಗುವ ಮುನ್ನ
ಬಯಕೆ ಕಂಗಳ ಕಾಂತಿ ಕುಂದಿ ಹೋಗುವ ಮುನ್ನ
ವರಮಹೋನ್ನತ ಭವ್ಯ ಈ ಹಿಂದು ರಾಷ್ಟ್ರ
ದರ್ಶಿಸಲು ಜಪಿಸೋಣ ಸಂಘಮಂತ್ರ || 8 ||

2 thoughts on “ಸಂಘಾಷ್ಟಕ – ಕನ್ನಡ – ಕಡಲೊಡೆಯ ಪದತೊಳೆವ

  1. ಉತ್ಕೃಷ್ಟ ಅನುವಾದ.ಭಾವ ತುಂಬಿದ ರಾಗ,ಧ್ವನಿ.

Leave a Reply

Your email address will not be published. Required fields are marked *