ಸಂಘಜನಕ ಕೇಶವಾ ಜನ್ಮತಳೆದು ಬಾರೋ

ಸಂಘಜನಕ ಕೇಶವಾ ಜನ್ಮತಳೆದು ಬಾರೋ
ಧ್ಯೇಯಮಾರ್ಗದಲ್ಲಿ ನಮಗೆ ದಾರಿ ತೋರೋ || ಪ ||

ಕೆಸರ ಒಡಲಿನಿಂದ ಕಮಲ ಅರಳಿದಂತೆ
ಮರಳುಗಾಡಿನಲ್ಲಿ ಹಸಿರು ಮೂಡಿದಂತೆ
ನಿಶೆಯನಳಿಸಿ ಉಷೆಯು ಉದಿಸಿದಂತೆ ಸಂಘ ಜನಿಸಿತು
ಬೇಗೆಯಿಂದ ಬೆಂದ ನೆಲಕೆ ಮುದದಿ ತಂಪನುಣಿಸಿತು || 1 ||

ನಾಡಸ್ವಾಭಿಮಾನವ ಪ್ರಶ್ನಿಸಿರಲು ದೈನ್ಯತೆ
ಬಾಡಿಹೋದ ಮನಗಳ ಕಾಡುತಿರಲು ಶೂನ್ಯತೆ
ಅರುಣನಂತೆ ತರುಣಜನಕೆ ತೋರಿ ಬಾಳ ಧನ್ಯತೆ
ಭರತಭೂಮಿಗಭಯವಿತ್ತೆ ಸಾರಿ ಶೌರ್ಯ ಸಂಹಿತೆ || 2 ||

ವಿಸ್ಮೃತಿಯ ವಿಷವನು ಸ್ವಾರ್ಥದಾಮಿಷವನು
ಭ್ರಷ್ಟತೆಯ ಕಸವನು ದ್ವೇಷ ಕಲ್ಮಶವನು
ನಾಶಮಾಡಿ ನಿಷ್ಠೆಯಿಂದ ದೇಶವನ್ನು ಕಟ್ಟಲು
ಸ್ಫೂರ್ತಿಯನ್ನು ನೀಡು ಇಂದು ಭರದಿ ಗುರಿಯ ಮುಟ್ಟಲು || 3 ||

ಪುಟ್ಟಸಸಿಯ ನೆಟ್ಟು ನೀ ದಿಟ್ಟತನದಿ ಸಲಹಿದೆ
ಗಟ್ಟಿನೆಲವ ಮೆಟ್ಟಿ ನೀ ಕಷ್ಟಪಟ್ಟು ಬೆಳೆಸಿದೆ
ಸಂಘವಿಂದು ಹಿಂದು ಜನರ ಎದೆಯ ಕದವ ತಟ್ಟಿದೆ
ಹಿಂದು ನೆಲದ ಕೀರ್ತಿಧ್ವಜವು ಗಗನವನ್ನು ಮುಟ್ಟಿದೆ || 4 ||

Leave a Reply

Your email address will not be published. Required fields are marked *