ಸಾಮರಸ್ಯದ ನವ್ಯಯುಗಕೆ ನಿಮಗಿದೋ ಆಮಂತ್ರಣ |
ಕಣ್ಣತೆರೆದು ಭ್ರಮೆಯ ತೊರೆದು ನೀಡಿ ಹಾರ್ದಿಕ ಸ್ಪಂದನ
ಮಾಡಿ ಸೀಮೋಲ್ಲಂಘನ || ಪ ||
ಭರತ ಭೂಮಿಯ ಚರಿತೆಯೊಡಲಲಿ ಅಡಗಿದೆ ಕಥೆ ಸಾವಿರ
ಮಡಿಲ ಮಕ್ಕಳ ಸೋಲುಗೆಲುವಿನ ನೋವು ನಲಿವಿನ ಹಂದರ
ಪ್ರಗತಿ ಪತನದ ಕಥನ ಮಥನದಿ ಸತ್ಯವಾಗಲಿ ಗೋಚರ
ಮತ್ತೆ ಮೂಡಲಿ ಭಾಸ್ಕರ || 1 ||
ಖಡ್ಗಬಲದಿಂ ಕುಟಿಲತನದಿಂ ನಡೆಯಿತಿಲ್ಲಿ ಮತಾಂತರ
ಒಂದೆ ನೆತ್ತರ ಬಂಧುಗಳಲಿ ಹಗೆಯ ವಿಷಬೀಜಾಂಕುರ
ಒಡೆದು ಆಳುವ ಕಪಟ ನೀತಿಯು ತಂದಿತೋ ಗಂಡಾಂತರ
ವಿಭಜನೆಯ ಫಲ ಭೀಕರ || 2 ||
ನಮ್ಮ ನಾಡನು ತುಂಡುಗೈದಿಹ ಧೂರ್ತಕೃತ್ಯವ ಖಂಡಿಸಿ
ಅರಿಯ ಜೊತೆಯಲಿ ಸಂಚುಹೂಡಿಹ ಭಂಡ ಜನರನು ದಂಡಿಸಿ
ರಾಷ್ಟ್ರವೆಮದು ಅಖಂಡವೆಂದು ವಿಶ್ವದೆದುರಲಿ ಮಂಡಿಸಿ
ಮಾತೃಭೂಮಿಯ ವಂದಿಸಿ || 3 ||
ಮೌನ ಮುರಿದು ಮಾತನಾಡಿ, ಎದೆಯ ಭಾವಕೆ ದನಿಯ ನೀಡಿ
ಸಖ್ಯ ಬೆಳೆಸಿ ಭೇದ ಮರೆತು, ಮುಖ್ಯವಾಹಿನಿಯಲ್ಲಿ ಬೆರೆತು
ಬಿಂಕ ಬಿಗುಮಾನವನು ತ್ಯಜಿಸಿ, ಶಂಕೆ ಅಂಜಿಕೆ ದೂರವಿರಿಸಿ
ಬನ್ನಿ ಐಕ್ಯದ ದೀಕ್ಷೆ ಧರಿಸಿ || 4 ||