ಸದ್ವಿಚಾರ ಧಾರೆಯಿಂದ ಚಿಮ್ಮಲಿ ಸ್ಫೂರ್ತಿ
ನವೋತ್ಸಾಹದಿಂದ ಹೊರಗೆ ಹೊಮ್ಮಲಿ ಶಕ್ತಿ || ಪ ||
ಭವ್ಯ ರಾಷ್ಟ್ರಗುಡಿಯ ಶಿಲ್ಪಕಾರರು ನಾವು
ದಿವ್ಯ ಪರಂಪರೆಯ ನವಕುಮಾರರು ನಾವು
ನವ್ಯರು ನಾವು, ನವೋನವ್ಯರು ನಾವು
ನಾವೆ ಇರಲು ತಾಯಿಗಿನ್ನು ಎಲ್ಲಿಯ ನೋವು?
ಇನ್ನು ಎಲ್ಲಿಯ ನೋವು || 1 ||
ಪಾದಘಾತದಿಂದ ಅರಿಯ ತೊತ್ತಳತುಳಿದು
ಬಾಹು ಬೆಳೆಸಿ ಭೂಮಿ ಬಾನಿನೆತ್ತರ ಬೆಳೆದು
ಅರಳಿ ನಗುವೆವು, ಸಿರಿಯ ಮರಳಿ ತರುವೆವು
ಅಳಿದ ಪಿತರ ಆತ್ಮತೃಪ್ತಿಗೊಳಿಸಿ ಮೆರೆವೆವು
ತೃಪ್ತಿಗೊಳಿಸಿ ಮೆರೆವೆವು || 2 ||
ಕ್ಲೈಬ್ಯ ಕಲ್ಮಶಗಳ ತಡೆಯ ಮೆಟ್ಟಿ ಮುರಿವೆವು
ಕ್ಷುದ್ರ ಹೃದಯ ದುರ್ಬಲತೆಯ ಅಟ್ಟಿಬಿಡುವೆವು
ನಿದ್ದೆ ಬಿಡುವೆವು, ಮುಂದೆ ಹೆಜ್ಜೆ ಇಡುವೆವು
ಸಿದ್ಧ ಹೃದಯದಿಂದ ನಾವು ಗೆದ್ದು ಬರುವೆವು
ನಾವು ಗೆದ್ದು ಬರುವೆವು || 3 ||
ಗುಂಡಿಗೆಯಿದು ಗುಂಡಿನೇಟಿಗಂಜಿ ನಡುಗದು
ಎಂದಿಗು ಸೋಲರಿಯಂಥ ಪಂಥವು ನಮದು
ಯೋಧರು ನಾವು, ಸಿಂಹನಾದರು ನಾವು
ನಾಡ ಕಷ್ಟ ಕಳೆವ ಮಹಾಕಾಲರು ನಾವು
ಮಹಾಕಾಲರು ನಾವು || 4 ||