ಸಾಗು ಮುಂದೆ ಸಾಗು ಮುಂದೆ ಭಾರತದ ಸಿಪಾಯಿಯೇ

ಸಾಗು ಮುಂದೆ ಸಾಗು ಮುಂದೆ ಭಾರತದ ಸಿಪಾಯಿಯೇ
ಧೈರ್ಯ ಶೌರ್ಯ ಮೂಡಿಬರಲಿ, ಹರಸಿ ಕಳುಹು ತಾಯಿಯೇ || ಪ ||

ಅಡಿಯ ಮುಂದೆ ಇಡಲು ಸ್ವರ್ಗ, ಹಿಂದೆ ಘೋರ ನರಕವು
ಹೆತ್ತ ಒಡಲ ಋಣವ ಸಲಿಸಲಿಂದು ಬಂದ ಭಾಗ್ಯವು
ಹಾಡು ಸಮರಗೀತೆಯ
ನೆನೆಯೊ ವೀರಗಾಥೆಯ
ಭಾರತಿಗೆ ಜೈ, ಭಾರತಿಗೆ ಆರತಿಯು ಜೈ ಜೈ ಜೈ         || 1 ||

ದೇಶಭಕ್ತಿ ಉಕ್ಕಿ ಹರಿದು ರಕ್ತ ಬೆಚ್ಚಗಾಗಲಿ
ಕೊರೆವ ಹಿಮದ ರಾಶಿಯಲ್ಲು ಮೈಯ ಛಳಿಯು ಕರಗಲಿ
ನುಗ್ಗಿ ನಡೆ, ಒಡ್ಡು ತಡೆ ಸಿಡಿಲು ಮಿಂಚು ಮೊಳಗಲಿ
ಧಾರೆ ಧಾರೆ ಗುಂಡು ಸುರಿದು ವೈರಿಯೆದೆಯ ಸಿಡಿಯಲಿ
ವಿಜಯಭೇರಿ ಬಾರಿಸು
ಅಜೇಯ ಧ್ವಜವ ಹಾರಿಸು
ಭಾರತಿಗೆ ಜೈ ಭಾರತಿಗೆ ಆರತಿಯು ಜೈ ಜೈ ಜೈ          || 2 ||

ಯಾರೆ ಮೀರಿ ಬರಲಿ ನೆಲವ ಜಲವ ಛಲದಿ ಕಾಯುವಾ
ಏರಿ ಏರಿ ಬರುವ ಕಡಲ ಅಲೆಯ ತೆರದಿ ಎರಗುವಾ
ಅಚಲವಿರಲಿ ಚಿತ್ತ ಹಿಮಾಚಲದ ರೀತಿ ಎತ್ತರ
ಸ್ವತಂತ್ರ ಘೋಷ ಮೊರೆಯಲಿ
ಮಂಗಳಾಂಗಿ ಮೆರೆಯಲಿ
ಭಾರತಿಗೆ ಜೈ ಭಾರತಿಗೆ ಆರತಿಯು ಜೈ ಜೈ ಜೈ….    || 3 ||

Leave a Reply

Your email address will not be published. Required fields are marked *

*

code