ರಾಷ್ಟ್ರದೇಕತೆ ರಾಷ್ಟ್ರದಸ್ಮಿತೆ ಪ್ರಲಯವರ್ಧಕ ರಾಷ್ಟ್ರೀಯತೆ
ಕೆರಳುತೆದ್ದಿದೆ ಕ್ರುದ್ಧ ನೇತ್ರದಿ ಪ್ರಬಲತರ ತಾಯ್ನೆಲದ ಮಮತೆ || ಪ ||
ಹಿಮಕಿರೀಟದ ಧವಳಕಿರಣದ ವಿಭವಹರಣಕೆ ಕೈಯನಿಟ್ಟು
ಮೂರ್ಖತೆಯ ಗೈಯದಿರು ವೈರಿಯೆ ಸತ್ಯದಿರವನು ಮರೆತು ಕೆಟ್ಟು
ಎಚ್ಚರೆಚ್ಚರ ಸಾಲಿರುವೆಗಳ ಹಳದಿ ಸಾಮ್ರಾಜ್ಯದಳಿಕೀಟ
ಎಚ್ಚರಿಕೆ ಮ್ಲೇಚ್ಛರಿಗೆ ಬರಿ ಕನವರಿಕೆಯಹುದೀ ಧವಳ ಮುಕುಟ || 1 ||
ಭಾರತದ ಈ ಭೂಮಿಯುದ್ದಕು ಯುದ್ಧಕಾಗಿಯೆ ಮಣ್ಣೊಳಡಗಿ
ಮೈಯುರಿದು ಮೈಮುರಿವ ಯೋಧನ ಭೀಮಬಾಹುದ್ವಯವೆ ಸೆಟೆದು
ಬಿಗಿದು ಕಬ್ಬಿಣವಾಗುತುಬ್ಬಿದೆ ಸ್ನಾಯುಮಂಡಲ ಪಂಕ್ತಿ ಪಂಕ್ತಿ
ಹೊಸೆಹೊಸೆದು ಹುರಿಗೊಳ್ಳುತಿದೆ ಹಿರಿಹೆಗಲ ಹಿಮಗಿರಿ ನರದ ತಂತಿ || 2 ||
ಯೋಧರಟ್ಟೆಯ ಬೆಟ್ಟಬೆಟ್ಟದ ಖಂಡಖಂಡದ ಮಾಂಸ ಮುಟ್ಟಿ
ಭೂಮಿಬಂಟರ ಭೂರಿದೇಹದ ಬಂಡೆಬಂಡೆಯ ಬೆನ್ನು ತಟ್ಟಿ
ಕಲ್ಲು ಮುಳ್ಳಿಗು ಕದನ ಕಲಿಸುವ ಜೀವಸಂದೇಶವನು ಊದಿ
ಹಳ್ಳಿಹಳ್ಳಿಗು ಹರಡುತಿದೆ ನವ ಪಾಂಚಜನ್ಯದ ನಾದವೇಧಿ || 3 ||