ಪ್ರದೀಪ್ತವಾಗಿದೆ ಹೃದಯ ಅನಂತ

ಪ್ರದೀಪ್ತವಾಗಿವೆ ಹೃದಯ ಅನಂತ
ಆಸೇತು ಹಿಮಾಚಲ ಪರ್ಯಂತ             || ಪ ||

ಜಗದೊಳಗೆದ್ದಿಹ ಹಾಲಾಹಾಲಗಳ
ಮೃಗಮಾನವರುದ್ಧಾರಕೆ ಕುಡಿದು
ಪೊರೆದಿಹ ವಿಷಕಂಠನ ಹಣೆಗಣ್ಣಿನ
ದಾವಾನಲವೀ ನಾಡಿನೊಳಿಹುದು        || 1 ||

ಮನ್ವಂತರಗಳ ದೈವೀ ಸಂಸ್ಕೃತಿ
ಮೈಗೂಡಿರುವೀ ನಾಡಿನ ಜನಕೆ
ನರಜಾತಿಯ ಸೆಳೆದಮರತೆಗೊಯ್ಯುವ
ಮಬ್ಬಾಗದೆ ಹಬ್ಬುವ ಹೆಬ್ಬಯಕೆ          || 2 ||

ಬಂದೆರಗಿರೆ ಹಿಂದುವಿನೆದೆ ಬೆಂಕಿಗೆ
ಬಹು ರೀತಿಯ ಭಯ ಭೀತಿಯ ಕೆಡಕು
ಹೊರಹೊಮ್ಮಿದೆ ತಾನೆಂದಿಗು ನಂದದೆ
ಬಹು ಕಾಲದ ಬಲಿದಾನದ ಬದುಕು    || 3 ||

ಶತಶತ ಸುತರಾಹುತಿಯಿಂದುರಿಯುತ
ಜಗ ಬೆಳಗುತ ಮೇಲೇರುವ ಜ್ವಾಲೆ
ಸೋಲು ನಿರಾಶಾ ನಿಶೆಯನು ದಹಿಸುತ
ಭಾರತಿಗಾಗಲಿ ಕೀರ್ತಿಯ ಮಾಲೆ        || 4 ||

Leave a Reply

Your email address will not be published. Required fields are marked *

*

code