ಒಂದು ದಿನ ಸಂಜೆಯ ಸಮಯ
ತಿರುಗಾಡಲು ಹೊರಟಾಗ
ಕಂಡೆನು ನಾ ಮನವನು ಸೆಳೆವ ಸುಂದರ ದೃಶ್ಯವನೊಂದ || ಪ ||
ಮಾರ್ಗದ ಬದಿಯಲಿ ಬಯಲು, ಆ ಬಯಲಲಿ ಮಕ್ಕಳ ಹುಯಿಲು
ಮಕ್ಕಳಿಗೆಲ್ಲಾ ಮುಖ್ಯನು ಒಬ್ಬ, ಗರ್ಜಿಸಿತವನಾ ಬಿಗಿಲು
ಟಿರ್ರ್ ಟ್ರಿಕ್… ಟಿರ್ರ್ ಟ್ರಿಕ್ …. ತತ್ತರಿಸಿತು ಆ ಮುಗಿಲು || 1 ||
ದಕ್ಷ ಆರಮ ಆಜ್ಞೆ, ಅದು ಶಿಸ್ತಿಗೆ ಸೂಚಕ ಸಂಜ್ಞೆ
ಸಂಜ್ಞೆಯನರಿತು ಸಾಗಿತು ಮುಂದೆ, ತರುಣರ ಬಾಲರ ಸೇನೆ
ಏಕ್-ದೋ-ಏಕ್-ದೋ, ಏಕ್-ದೋ-ಏಕ್-ದೋ, ಸಂಪತಗೊಂಡಿತು ತಾನೇ || 2 ||
ಮಂಡಲದೊಳಗಡೆ ಪೀಠ ಅದರೊಳು ಹಾರುವ ಬಾವುಟ
ಆಗಸಕೇರಿಸಿ ಆನಂದದಲಿ, ಗೈದರು ಧ್ವಜ ಪ್ರಣಾಮ
ಏಕೆ-ದೋ-ತೀನ್, ಇದು ಸಂಸ್ಕಾರದ ಓನಾಮ || 3 ||
ಶಿಶುಗಳು, ಬಾಲರು, ತರುಣರು, ಅಲ್ಲಿ ಎರಡೋ ಮೂರೋ ಗಣಗಳು
ಸಾಲಲಿ ನಿಂತು ಕೈಗಳನಾಂತು, ವಂದನೆ ಆದಿತ್ಯನಿಗೆ
ಓಂ ಮಿತ್ರಾಯ ನಮಃ, ಮಂತ್ರೋಚ್ಛಾರದ ಜತೆಗೆ || 4 ||
ಒಂದೆಡೆ ತರುಣರ ಗುಂಪು, ಆ ಗುಂಪಿಗೆ ಚಡ್ಡಿಯ ನೋಂಪು
ಉತ್ಸಾಹದಲಿ ಆಡುವರೆಲ್ಲಾ, ಕಾಣಲು ಕಣ್ಣಿಗೆ ಸೊಂಪು
ಕಬಡಿ, ಕಬಡಿ, ಕಬಡಿ, ಕಬಡಿ ಕೇಳಲು ಕಿವಿಗಳಿಗಿಂಪು || 5 ||
ಬಾವುಟದೆದುರಲಿ ನೋಡಿ, ಅಲ್ಲಿ ಕುಳಿತರು ಮಂಡಲ ಮಾಡಿ
ಭಾವವನರಳಿಸಿ ಹಾಡುವರೆಲ್ಲ ಹಾಡಿಗು ಎಂಥ ಮೋಡಿ
‘ಬಾಬಾ ಸಂಘಸ್ಥಾನದ ಕಡೆಗೆ’ ಮಿಡಿಯಿತು ಎನ್ನೆದೆ ನಾಡಿ || 6 ||
ಆಟದೊಳಗೆ ಆಮೋದ, ವಿಧವಿಧ ಸ್ಪರ್ಧೆಗಳಲಿ ಉನ್ಮಾದ
ನಿಶ್ಚಲ ನಿಲುವಿನ ಪ್ರಾರ್ಥನೆಯಲ್ಲಿ, ಮೊಳಗಿತು ಧ್ಯೇಯ ನಿನಾದ
‘ಭಾರತ್ ಮಾತಾ ಕೀ ಜಯ್’ – ಮರೆತರು ಎಲ್ಲಾ ಭೇದ || 7 ||
ಹತ್ತಿರದಲಿ ಕುಳ್ಳಿರಿಸಿ, ಮತ್ತೆ ಶ್ಲೋಕಾರ್ಥಗಳನು ಪಠಿಸಿ
ಮಕ್ಕಳ ಮುಖ್ಯನು ಮಾತಾಡುವನು, ಏನೋ ಸಂಜ್ಞೆಯ ಭಾಷೆ
ತರುಣ-ಬಾಲ-ಒಟ್ಟು-ಶಿಶು, ನನಗೂ ತಿಳಿಯುವ ಆಸೆ || 8 ||