ಓಗೊಡುತ ಉತ್ತುಂಗ ಸಾಧನೆಯ ಕರೆಗೆ

ಓಗೊಡುತ ಉತ್ತುಂಗ ಸಾಧನೆಯ ಕರೆಗೆ
ನಡೆದಿಹರು ಸಾಸಿರದ ಸಾಧಕರು ಇಲ್ಲಿ
ಸಂಘಶಕ್ತಿಯ ಭವ್ಯ ಸಾಗರದ ಕಡೆಗೆ
ಹರಿದಿಹರು ಸಾವಿರದ ಸರಿತೆಯರು ಇಲ್ಲಿ || ಪ ||

ಹನಿಹನಿಯು ಝರಿಯಾಗಿ ತೊರೆಯಾಗಿ ನದಿಯಾಗಿ
ಜಲಧಿರೂಪವ ತಳೆವ ರಮ್ಯನೋಟ
ಅಣುಅಣುವು ಒಂದಾಗಿ ಶಕ್ತಿ ಪರ್ವತವಾಗಿ
ಏಕತೆಗೆ ಲಭಿಸಿಹುದು ಅಗ್ರಪೀಠ || 1 ||

ಅಡಿಗಡಿಗೆ ನಡುಗಿಸಿದ ಕೇಡುಗಳ ಸೇಡುಗಳ
ಜಾಡಝಾಡಿಸಿ ನಾಡಗುಡಿಯ ಕಟ್ಟಿ
ರೂಢಿಯೊಳಗೂಡಿರುವ ಮೌಢ್ಯವನು ಸದೆಬಡಿದು
ನಡೆದಿಹರು ಸಾಹಸದ ಪಡೆಯ ಕಟ್ಟಿ || 2 ||

ಬೆಟ್ಟದೆತ್ತರ ಬೆಳೆದ ಸುತ್ತಲಿನ ಕತ್ತಲಿನ
ಹುತ್ತಗಳ ಕತ್ತುಗಳ ಕತ್ತರಿಸುತಾ
ದಿಟ್ಟತನ ಗಟ್ಟಿತನ ಮೆರೆದಿಹರು ಜಟ್ಟಿಗಳು
ದಿಕ್ತಟದಿ ಹೊಂಬೆಳಕ ಬಿತ್ತರಿಸುತಾ || 3 ||

Leave a Reply

Your email address will not be published. Required fields are marked *