ನೋಡದೊ ಹರಿದೋಡುತಲಿದೆ ನದಿ ವಾರಿಧಿಗೆ
ಮಾನವನೇ ! ಗುರುವಹುದದು ಜೀವನಝರಿಗೆ || ಪ ||
ಪಥಕೆದುರಾಗುವ ಪರ್ವತಪಂಕ್ತಿಯ ಕೊರೆದು
ಸಂಕಟಗಳ ಸೀಳುತ ಹೊಸದಾರಿಯ ತೆರೆದು
ಚಿಮ್ಮುವ ಧಾರೆಯ ಬಲುಮೆಯ ನೋಡದೊ ನೋಡು
ಹಿಂಬಾಲಿಸು, ನಿನ್ನೀ ಜೀವನಕದೆ ಜಾಡು || 1 ||
ಸುಗುಣದ ಸುರಸುಂದರ ಹೂಬನಗಳ ಬೆಳೆಸಿ
ತಪದಾಗರ ಗಿರಿಕಂದರ ಗವಿಗಳ ಬಳಸಿ
ಅಜರಾಮರ ಆದರ್ಶದ ಸಾಧನೆಗೆಳೆಸಿ
ಜೀವನಝರಿ ಹರಿದೋಡಲಿ ಕಲುಷವನಳಿಸಿ || 2 ||
ಬಾಳುದ್ದದ ಸೋಪಾನಕೆ ಜನರನು ಕರೆದು
ಚಣನಿಲ್ಲದೆ ಮುಂಬರಿಯುವ ನೀತಿಯನೊರೆದು
ಸ್ನೇಹದ ಸಲಿಲದಿ ಸೆಳೆದೊಯ್ ಸಾಗರದೆಡೆಗೆ
ಕರ್ತವ್ಯವ ಪೂರೈಸುವ ಧ್ಯೇಯದ ಗುಡಿಗೆ ! || 3 ||