ನನ್ನ ನಾಡ ಚೆನ್ನ ನಾಡ ಬನ್ನಬಡುತ ಪೊರೆಯುವಾ
ನನ್ನಿಯಿಂದ ತಾಯಿನಾಡ ಹೊನ್ನ ಸಿರಿಯ ಬೆಳಗುವಾ || ಪ ||
ರಾಮಕೃಷ್ಣ ವಿದ್ಯಾರಣ್ಯ ವ್ಯಾಸರನ್ನು ಸ್ಮರಿಸುವಾ
ಬುದ್ಧ ಬಸವ ಶಂಕರಾದಿ ಗುರುಗಳನ್ನು ನಮಿಸುವಾ
ಶಿವ ಪ್ರತಾಪ ಹರಿಹರಾದಿ ಭೂಪರನ್ನು ಸ್ಮರಿಸುವಾ
ಚಂದ್ರಗುಪ್ತ ಪುಲಿಕೇಶಿ ವೀರರನ್ನು ನಮಿಸುವಾ
ನಾಡಮೇಲ್ಮೆಗಾಗಿ ದುಡಿದ ಇವರ ಸ್ಮರಣೆ ಮಾಡುವಾ
ನಾಡಮೇಲ್ಮೆಯಲ್ಲಿ ನಮ್ಮ ಮೇಲ್ಮೆಯನ್ನು ಕಾಣುವಾ || 1 ||
ಹಳದಿಘಾಟಿ ತಾಳಿಕೋಟೆ ಪಾಣಿಪತ್ತ ನೋಡುವಾ
ಹಂಪೆ ವಿರೂಪಾಕ್ಷನನ್ನು ನಮಿಸಿ ಸ್ಫೂರ್ತಿ ಪಡೆಯುವಾ
ಚಿತೋಡದುರ್ಗ ರಾಯದುರ್ಗ ಸಿಂಹದುರ್ಗ ನೋಡುವಾ
ಅಲ್ಲಿ ಮಡಿದು ಸ್ವರ್ಗಗೈದ ವೀರರನ್ನು ನಮಿಸುವಾ
ಜಗನ್ನಾಥ ಸೋಮನಾಥ ಕಾಶಿ ಕಾಂಚಿ ನೋಡುವಾ
ವಿರಾಟ ಹಿಂದುರಾಷ್ಟ್ರವನ್ನು ನೋಡಿ ಸ್ಫೂರ್ತಿ ಪಡೆಯುವಾ || 2 ||
ಗಂಗೆ ಯಮುನೆ ತುಂಗಭದ್ರೆ ನದಿಗಳಲ್ಲಿ ಮೀಯುವಾ
ಸಹ್ಯ ವಿಂಧ್ಯ ಹಿಮನಗಾದಿ ಗಿರಿಗಳನ್ನು ಸ್ಮರಿಸುವಾ
ಗಿರಿಗಳಂತೆ ಅಚಲರಾಗಿ ಧ್ಯೇಯಕಾಗಿ ಕಾದುವಾ
ವೀರಮಾತೆ ಪುತ್ರರೆಂದು ಸೆಡ್ಡು ಹೊಡೆದು ನಿಲ್ಲುವಾ
ಸಂಘಮಂತ್ರ ಹೇಳಿಕೊಟ್ಟ ಮುನಿಯ ಸ್ಮರಣೆ ಮಾಡುವಾ
ಶಕ್ತಿಮುಕ್ತಿ ನಿಷ್ಠೆಯಿಂದ ಕಾರ್ಯಪೂರ್ತಿ ನೋಡುವಾ || 3 ||