ನಮ್ಮದೆಲ್ಲರ ಬಾಳಿದಾಗಲಿ ನಿನ್ನದೇ ಪ್ರತಿಬಿಂಬದಂತೆ
ಪೂರ್ಣವಾಗಲಿ ಧ್ಯೇಯ ಸಾಧನೆ ಹಿರಿಮೆಗೇರಲಿ ಭರತಮಾತೆ || ಪ ||
ಬಾಳನುರಿಸಿದೆ ಬಾಲ್ಯಜೀವನದಿಂದಲಂತಿಮ ಕ್ಷಣದ ವರೆಗು
ಬದುಕಿನುದ್ದಕು ಬಿಡದೆ ನಡೆದಾ ಮೂಕ ತಪವನು ಮರೆವುದೆಂತು ?
ಅಳೆಯಲಸದಳ ವಿಧಿಗು ನಿನ್ನಯ ಕ್ಷೀರಸಾಗದಂಥ ಬದುಕು
ಬಿಂದುವಿನ ತೆರದಿಂದಲೆಮಗಾ ಸಿಂಧುವಿನ ಸವಿಮಿಲನ ಸಾಕು || 1 ||
ಶ್ರಮವ ಸಹಿಸಿದೆ ವಿಶ್ರಮಿಸದೇ ಜನ್ಮದೊಳು ನೀನೊಂದು ಕ್ಷಣವು
ರಾಷ್ಟ್ರಯಜ್ಞಕೆ ಆಜ್ಯವಾಯಿತು ನೆತ್ತರಿನ ಪ್ರತ್ಯೇಕ ಕಣವು
ಆತ್ಮದಾಹುತಿಯಿತ್ತು ಸಾರಿದೆ ದೇಶಮುಕ್ತಿಯ ಮಂತ್ರವೆಮಗೆ
ತಾಗಲೆಮ್ಮಯ ಹೃದಯಪ್ರಣತಿಯ ಯಜ್ಞ ಜ್ವಾಲೆಯದೊಂದೆ ಕಿಡಿಯು || 2 ||
ಬೀಜದಂತೆಯೆ ನಿಂತೆ ನೆಲದಲಿ, ಬಾಳ ಪೊರೆ ಹಾ ! ಸೀಳಿ ಹೋಯ್ತು
ಭರತದೇಶದಿ ಸಂಘರೂಪದಿ ಅಮರ ಭೂರುಹದುಗಮವಾಯ್ತು
ನಿಲ್ಲಲೇತಕೆ ರಾಷ್ಟ್ರವೊಂದಕೆ, ಆಸರಾಗಲಿ ಅಖಿಲ ಜಗಕೆ
ಬಾಳಿದಾ ಹಿರಿಯಾಲಕಾಗಲಿ ಹಸುರಿನೆಲೆ ಶಾಖೋಪಶಾಖೆ || 3 ||
ನಿನ್ನ ಮನದುರಿಗೆಚ್ಚರಾಗಲಿ ಎಮ್ಮ ವೇದನೆ ಹೃದಯದೊಳಗೆ
ಜನ್ಮವಿದರೊಳೆ ಧ್ಯೇಯ ಫಲಿಸಲಿ ಎಂದು ನಿಶಿದಿನ ತಪಿಸುತಿಹೆವು
ಸಾಗುತಿರುವೆವು ನಿನ್ನ ಸ್ವರ್ಗಿಕ ಪಾವನಾಶೀರ್ವಾದ ಪಡೆದು
ನೀನು ಕಲಿಸಿದುದೆಲ್ಲ ಸಾಕ್ಷಾತ್ಕರಿಸಿ ಕಾಣುವ ಹರಕೆಯಿರಲಿ
ಶೀಘ್ರ ಕಾಲದೊಳೀಗ ಸಾಧನೆ ಪೂರ್ಣವಾಗಲಿ ಗೆಲುವು ತರಲಿ || 4 ||