ಮನುಕುಲದೇಳಿಗೆ ಸಾಧಿಸ ಹೊರಟೆವು

ಮನುಕುಲದೇಳಿಗೆ ಸಾಧಿಸ ಹೊರಟೆವು
ಪ್ರಭಾತ ಕಿರಣಗಳರಳಿಸುತ
ಶೋಷಿತ ಪೀಡಿತ ದಲಿತ ಜನಾಂಗದ
ಭಾಗ್ಯೋದಯವನು ನಿರ್ಮಿಸುತಾ || ಪ ||

ಮೈ ಬೆವರಿನ ಜಲಪಾತವ ಧುಮುಕಿಸಿ ಹೊನ್ನನು ಸೃಜಿಪೆವು ಮಣ್ಣಿನಲಿ
ಕಗ್ಗಲ್ಲೊಳು ಸುರಪ್ರತಿಮೆಯ ನಿರ್ಮಿಸಿ ಹೂವರಳಿಸುವೆವು ಮುಳ್ಳಿನಲಿ
ಸತತ ಪರಿಶ್ರಮ ಸುರಿಸುತ ನಡೆವೆವು ವೈಭವ ಶಿಖರಕೆ ಧಾವಿಸುತಾ || 1 ||

ಯಾರೊಬ್ಬರ ಬಾಯ್ತುತ್ತನು ಕಸಿವುದು ಸಲ್ಲದು ಬೇಕಿಲ್ಲವು ನಮಗೆ
ನ್ಯಾಯಕೆ ನೀತಿಗೆ ಹೋರಾಡುತಲಿರುವೆವು ನಾವ್ ಕಡೆಯುಸಿರಿನವರೆಗೆ
ನಮ್ಮಯ ಹಿತವನು ಪರಹಿತದೊಂದಿಗೆ ಬೆಸೆವೆವು ಸಮರಸ ಸಾಧಿಸುತ || 2 ||

ಬಟ್ಟೆಯು ರೊಟ್ಟಿಯು ವಿದ್ಯೆಯು ವಸತಿಯು ಜೀವನಕಿವು ಬೇಕೇ ಬೇಕು
ಪ್ರತಿ ವ್ಯಕ್ತಿಯು ಪ್ರತಿ ಪರಿವಾರವು ಸುಖದಿಂದಿರುವಂತಾದರೆ ಸಾಕು
ದೇಶದ ಮೇಲ್ಮೆಗೆ ದುಡಿಯುವರೆಲ್ಲರೂ ಒಮ್ಮನದಿಂದಲಿ ನಗುನಗುತಾ [|| 3 ||

ಭಾರತ ಮಾತೆಯ ವೈಭವ ಗೌರವ ಪ್ರಾಣಕಿಂತ ಮಿಗಿಲಾಗಿಹುದು
ಯುಗಯುಗದಿಂದಲೂ ಲೋಕದ ಹಿತವೇ ನಮ್ಮೆಲ್ಲರ ಗುರಿಯಾಗಿಹುದು
ಧನ್ಯತೆ ಪಡೆವೆವು ಜೀವನವೆಲ್ಲವ ಮಾತೆಯ ಪದತಲಕರ್ಪಿಸುತಾ || 4 ||

Leave a Reply

Your email address will not be published. Required fields are marked *

*

code