ಮನಸಿನ ಪ್ರಶಮನ ಸದ್ಗುಣ ವಿಕಸನ

ಮನಸಿನ ಪ್ರಶಮನ ಸದ್ಗುಣ ವಿಕಸನ

ಸೃಷ್ಟಿಯ ಏಳ್ಗೆಯ ಬಯಕೆ

ಶತಶತಮಾನದ ಶ್ರುತಿ ಸ್ಮೃತಿ-ಸಂಸ್ಕೃತಿ

ಹರಿದಿದೆ ಜ್ಞಾನದ ಸರಿತೆ                                         || ಪ ||

 

ಗೆಳೆಯನ ಸಲುಗೆಯು, ಮಡದಿಯ ಅನುನಯ

ಪ್ರಭುವಾಜ್ಞೆಯ ಬಲ ಅದಕಿಹುದು

ಉಭಯ ತಟಗಳಲು ಮನುಜನ ಬದುಕಿಗೆ

ಭದ್ರ ಬುನಾದಿಯ ಬಲಿದಿಹುದು                           || 1 ||

 

ವಿಪ್ಲವ ತಲ್ಲಣ ದಳ್ಳುರಿಗಳ ಧಗೆ

ನಿಲ್ಲಲಿ ದ್ವೇಷದ ಕರಾಳ ಹೊಗೆ

ಪಲ್ಲವಿಸಲಿ ಕತೆ-ಕವನಗಳ ತರುಲತೆ

ಚೆಲ್ಲಲಿ ಸ್ನೇಹದ ಮುಗುಳುನಗೆ                            || 2 ||

 

ಅರಳಲೂ ಬಲ್ಲೆವು ಮುರಳಿ ನಿನಾದಕೆ

ಕರಳಲು ಕುಣಿವುದು ಕರದಿ ಧನು

ಸಿಂಜಿನಿಯಲ್ಲಿಯು ಸಂಗೀತದ ಸ್ವರ

ಕಲಿಯುವ ಜೀವನ ಕಲೆಯಿದು                           || 3 ||

 

ಒಡಕ ನಿವಾರಿಸಿ ಕೆಡುಕ ನಿವಾಳಿಸಿ

ಹುಡುಕುವ ಸರ್ವೋನ್ನತಿಯ ಪಥ

ಭವನ ವಿಭವದಲೂ ಪರಹಿತ

ನಿಹಿತವು ಸಕಲರ ಸುಕ್ಷೇಮದ ಶಪಥ                || 4 ||

 

ಪ್ರತಿಪಾದಿಸಲೀ ಪ್ರತಿ ಪದ-ಪದವೂ

ಪ್ರತಿಪದೆ ಪೂರ್ಣತೆಯೆಡೆಗೆ

ಕ್ಷತವಿರದಕ್ಷರ ಮಾಲಿಕೆಯಾಗಲಿ

ಭೂಷಣ ಭಾರತ ಭೂರಮೆಗೆ                            || 5 ||

Leave a Reply

Your email address will not be published. Required fields are marked *