ಮನಮನ ಬೆಸೆಯುತ ಅಸಮತೆ ನೀಗುತ

ಮನಮನ ಬೆಸೆಯುತ ಅಸಮತೆ ನೀಗುತ
ಚಲಿಸಲಿ ಸಮರಸತೆಯ ಯಾನ
ಅಳಿಸುತ ವಿಷಮತೆ ಗೊಳಿಸುತ ಐಕ್ಯತೆ
ಗುಣಿಗುಣಿಸುತ ಮಾತೆಯ ಗಾನ
ಜಯಹೇ ಜಯಹೇ ಜಯ ಭಾರತ ಮಾತಾ ಜಯಹೇ || ಪ ||

ಪ್ರತಿ ಎದೆಯಾಳದ ಕಣಕಣದಲ್ಲಿಯೂ
ಸ್ವಾಭಿಮಾನ ಸುಧೆ ಹರಿಸೋಣ
ಸ್ತುತಿಸುತ ಮಾತೆಯ ವಿಜಯದ ಮಂತ್ರವ
ಬಾಂದಳದೆತ್ತರ ಹಬ್ಬೋಣ
ಒಂದೇ ರಕ್ತವ ಹಂಚುತ ನಾವು
ಒಂದಾಗುತ ಸಂಚರಿಸೋಣ || 1 ||

ಧ್ಯೇಯ ಸಮರ್ಪಿತ ಕಾರ್ಯದ ಪಥದಲಿ
ಕಲುಷಗಳೆಲ್ಲವ ತ್ಯಜಿಸೋಣ
ಸೇವೆಯ ಮಂತ್ರವ ಎಲ್ಲೆಡೆ ಬೆಳಗುತ
ನಾಡಿಗೆ ಬೆಳಕನು ಬೀರೋಣ
ಸಮರಸ ಬಾಳ್ವೆಗೆ ಸಹನೆಯ ಸೂತ್ರವ
ಹೆಣೆಯುತ ಸಹಮತ ಸಾರೋಣ || 2 ||

ವಿಕೃತ ಮನಸನು ಸುಕೃತಗೊಳಿಸಲು
ವಕ್ರತೆಗಳ ಕಿತ್ತೊಗೆಯೋಣ
ಕವಿದಿಹ ಜಡತೆಯ ಬಂಧನ ಕಳಚಲು
ಮೈಕೊಡವುತ ಪುಟಿದೇಳೋಣ
ನೆಲದಭಿಮಾನವ ಹೃದಯದಿ ತುಂಬುತ
ಅಭಿನವ ಭಾರತ ಕಟ್ಟೋಣ || 3 ||

Leave a Reply

Your email address will not be published. Required fields are marked *

*

code