ಮನದ ಮೂಲೆಯಲ್ಲಿ ಮೊಳೆತ
ಮಧುರ ಭಾವ ಸುಂದರ
ಮಾತೆ ನಿನ್ನ ಮೂರ್ತಿಗೆನ್ನ
ಹೃದಯವಾಯ್ತು ಮಂದಿರ || ಪ ||
ನಿನ್ನ ಹಿರಿಮೆಯರಿಮೆ ಎನ್ನ
ಹೃದಯ ಹಸನುಗೊಳಿಸಿತು
ಪ್ರೇಮದೊಡನೆ ಪೂಜ್ಯಭಾವ
ಬೆರೆತು ಭಕ್ತಿ ಸ್ಫುರಿಸಿತು || 1 ||
‘ನಾನು’ ಏನು ಎಂಬ ಅರಿವು
ನನ್ನ ಒಳಗೆ ಉದಿಸಿತು
ನಿನ್ನ ಜೊತೆಗೆ ಲೀನಗೊಳುವ
ಭಾವವೊಂದು ಬೆಳೆಯಿತು || 2 ||
ನಮ್ಮೊಳಗಿನ ಭಾವ ಬೆಸುಗೆ
ಗುರು ಭಗವೆಯೇ ಪ್ರೇರಕ
ಮೇಲರಿಮೆಯ ಮೌಢ್ಯ ತೊಡೆದ
ಮಹಾ ಮಾರ್ಗದರ್ಶಕ || 3 ||
‘ನಾನು’ ಲೀನನಾದ ಮೇಲೆ
ನನ್ನದೇನು ಉಳಿಯಿತು
ತನುವು ಮನುವು ಜೀವನವು
ಎಲ್ಲ ನಿನ್ನದಾಯಿತು || 4 ||