ಮಾತೆಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ

ಮಾತೆಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ
ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೆ ಆಸೆಯು ಮನದಲಿ   || ಪ ||

ಎಡರು ತೊಡರುಗಳೆಲ್ಲ ತುಳಿಯುತ ಮುಂದೆ ನುಗ್ಗುವೆ ಭರದಲಿ
ನಿನ್ನ ನಾಮ ನಿನಾದವಾಗಲಿ ಶ್ರಮಿಪೆ ನಾ ಪ್ರತಿ ಕ್ಷಣದಲಿ
ನಿನ್ನ ಗೌರವಕೆದುರು ಬರುವ ಬಲವ ಮುರಿವೆನು ಛಲದಲಿ
ಜಗದ ಜನನಿ ಭಾರತ ಇದ ಕೇಳಿ ನಲಿಯುವೆ ಮನದಲಿ        || 1 ||

ನಗುತ ನಲಿಯುವ ನಿನ್ನ ವದನವ ನೋಡಿ ನಲಿವುದು ಎನ್ನೆದೆ
ನಿನ್ನ ದುಃಖಿತ ವದನವೀಕ್ಷಿಸೆ ಸಿಡಿವುದೆನ್ನಯ ಹೃದಯವು
ನಿನ್ನ ಮುಖದಲಿ ಗೆಲವು ತರಲು ನೀರುಗೈಯುವೆ ರಕ್ತವ
ಎನ್ನ ಕಣಕಣ ತೇದು ಬಸಿಯುವೆ ಪೂರ್ಣ ಜೀವನಶಕ್ತಿಯ       || 2 ||

ನಿನ್ನ ತೇಜವ ಜಗವು ನೋಡಲಿ ಉರಿವೆ ದೀಪದ ತೆರದಲಿ
ಎನ್ನ ಶಕ್ತಿಯ ಘೃತವ ಸತತವು ಎರೆಯುತಿರುವೆನು ಭರದಲಿ
ಮಾತೃಮಂದಿರ ಬೆಳಗುತಿರಲಿ ನಾನೇ ನಂದಾ ದೀವಿಗೆ
ಬತ್ತಿ ತೆರದೀ ದೇಹ ಉರಿಯಲಿ ಸಾರ್ಥಕತೆ ಈ ಬಾಳಿಗೆ          || 3 ||

ರುದ್ರನಾಗಿ ವಿರೋಧಿ ವಿಷವನು ಭರದಿ ನಾನದ ನುಂಗುವೆ
ಜಗವ ಮೆಚ್ಚಿಸಿ ಅದರ ಹೃದಯವ ನಿನ್ನೆಡೆಗೆ ನಾ ಸೆಳೆಯುವೆ
ಸೃಜಿಪೆ ಜಗದಲಿ ನಿನ್ನ ಪೂಜಿಪ ಕೋಟಿ ಕೋಟಿ ಭಕ್ತರ
ಕೀರ್ತಿ ಶಿಖರದಿ ಮಾತೆ ಮಂಡಿಸು ಅರ್ಪಿಸುವೆ ನಾ ಸರ್ವವಾ    || 4 ||

One thought on “ಮಾತೆಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ

Leave a Reply

Your email address will not be published. Required fields are marked *

*

code