ಕ್ರೋಧನದ ದಶಮಿಯಿದು ಎಂದಿನಂತಲ್ಲ

ಕ್ರೋಧನದ ದಶಮಿಯಿದು ಎಂದಿನಂತಲ್ಲ
ಸಂಭ್ರಮದ ಪರ್ವವಿದು ಪಾಲ್ಗೊಳ್ಳಿರೆಲ್ಲ
ದಿಗ್ವಿಜಯಗೈಯಲಿದು ನೀಡುತಿದೆ ಸ್ಫೂರ್ತಿ
ಮುನ್ನುಗ್ಗಿ ಸಾಧಿಸಲು ಘನಧ್ಯೇಯ ಪೂರ್ತಿ || ಪ ||

ಶೂನ್ಯದೊಳು ಸೃಷ್ಟಿಯನು ಗೈದ ಮಾಂತ್ರಿಕನಾರು ?
ಮಸಣದೊಳು ನಂದನವ ನಿರ್ಮಿಸಿದ ಕಲಿ ಯಾರು ?
ಜನಮನದಿ ನಾಡೊಲವ ಬಿತ್ತಿದನು ಕೇಶವನು
ಅವನತಿಯ ಸುಳಿಯಿಂದ ಎತ್ತಿದನು ದೇಶವನು || 1 ||

ಗಾಢಾಂಧಕಾರದಲಿ ಮುಳುಗಿರಲು ಯುವಜನತೆ
ಭರವಸೆಯ ಬೆಳಕನ್ನು ಬೀರಿಹುದು ಈ ಹಣತೆ
ಧ್ಯೇಯದುಜ್ವಲ ಪ್ರಭೆಯ ಮನಮನದಿ ಪಸರಿಸುತ
ದಿವ್ಯಸಂಘದ ಜ್ಯೋತಿ ಉರಿಯುತಿದೆ ಅನವರತ || 2 ||

ಬೆವರು ನೆತ್ತರ ಸತತ ತರ್ಪಣವ ನೀಡುತಲಿ
ರಾಷ್ಟ್ರದಾರಾಧನೆಗೆ ಕಾಯ ಕಾದಿರಿಸುತಲಿ
ದುಡಿದು ಮಡಿದಿಹಸಂಖ್ಯ ಸಾಧಕರ ಆದರ್ಶ
ನೀಡುತಿದೆ ಜಾಗೃತಿಯ ಪ್ರೇರಣೆಯ ವರಸ್ಪರ್ಶ || 3 ||

ಹೊಂಚು ಹಾಕಿಹ ಸಂಚುಗಾರ ವಂಚಕರನ್ನು
ಭಂಜಿಸಿರಿ ನಂಜು ಕಾರುವ ದುಷ್ಟ ಖಳರನ್ನು
ರಾಷ್ಟ್ರಜೀವನದೆಲ್ಲ ರಂಗವನು ಆವರಿಸಿ
‘ವಜ್ರಸಂಕಲ್ಪಿ’ಗಳೆ ವಿಜಯಮಾಲೆಯ ಧರಿಸಿ || 4 ||

Leave a Reply

Your email address will not be published. Required fields are marked *

*

code