ಹೊಸ ದ್ವೀಪದಿ ಹೊಸ ದೀಪವ ಸೃಜಿಸುವ
ಜೀವನ ಜಲಧಿಯ ನಾವಿಕನೇ || ಪ ||
ಹೊಸ ಹೊಸ ಗ್ರಹದೊಳು ಗೃಹಗಳ ರಚಿಸುವ
ಮನ ಗಗನದ ವೈಮಾನಿಕನೇ || ಅ.ಪ ||
ಕಾದಿವೆ ಕಡಲಾಳದಿ ಜಲಚರಗಳು
ಅಲೆಗಳು ಶಿಲೆಗಳು ಜೋಪಾನ
ತಾರಾಲೋಕದಿ ಮಹಲುಗಳೆನಿತೋ
ಮರೆಯಾಗಿಹುದಲ ಸೋಪಾನ || 1 ||
ನಿಶೆ ನೀರದ ಬಿರುಗಾಳಿಯು ಕವಿಯಲು
ಸಾಹಸವೊಂದೇ ಪ್ರಿಯ ಬಂಧು
ಸಾಗರದೇರಿಳಿತಕೆ ತೆರೆ ಹೊಡೆತಕೆ
ಯಾತ್ರೆಯ ತೊರೆಯದಿರೆಂದೆಂದೂ || 2 ||
ಅಗಸದಂಚಿನ ಮುಗಿಲಿನ ಮಿಂಚಿನ
ಸಂಚಾರವೆ ಮಿದುಳೊಳಗಿರಲು
ಆರದ ಸ್ಫೂರ್ತಿ ಅದಮ್ಯೋತ್ಸಾಹದಿ
ಸುಮ್ಮನೆ ಕುಳಿತೆಂತಿರಬಹುದು || 3 ||
ಹೊಸ ದ್ವೀಪದಿ ಹೊಸ ದೀಪವ ಬೆಳಗುವ
ಜೀವನ ಜಲಧಿಯ ನಾವಿಕನೇ
ಬಿಡು ಮುಳುಗುವ ಭಯ ಮುಂಬರಿಯಲು ಜಯ
ಗುರಿ ಹಿರಿದೆಂಬುದು ನೆನಪಿರಲಿ || 4 ||
ಹೊಸ ಹೊಸ ಗ್ರಹದೊಳು ಗೃಹಗಳ ಬೆಳೆಸುವ
ಹಿರಿ ಗಗನದ ವೈಮಾನಿಕನೇ
ಭೂಹಿತಕಾಗಿಯೇ ಪ್ರತಿಭಾ ಪುಷ್ಪಕ
ಭೂಮಿಯ ಮೇಲೇರುತಲಿರಲಿ || 5 ||