ಹಿಮಗಿರಿಗು ಹಿಂದುಸಾಗರಕು ನಡುವೆ
ಭಾರತದ ಶತಕಗಳ ಸುಖದುಃಖ ಪದರಗಳು ಮೈಮುರಿದು
ದಾಸ್ಯ ದೌರ್ಬಲ್ಯ, ನೈರಾಶ್ಯಗಳ ಪರದೆಗಳ ಹರಿದು
ದಿಕ್ಕುದಿಕ್ಕಿನ ಹೊಡೆತ ಒತ್ತಡಕೆ ಉಬ್ಬುತಲಿ
ಮೊಳೆತು ಮೇಲೆದ್ದು ಬೆಳೆಯಿತು ದಿಬ್ಬ
ಮಹೋನ್ನತ ಪರ್ವತವೆ ಕಡೆಗಾಯ್ತು, ಅಬ್ಬ ! || ಪ ||
ಸುತ್ತೆಲ್ಲ ಹಸುರು ವನ ಪಸರಿಸುತ
ಹತ್ತಿ ನೆತ್ತಿಯನೇರಿ ನಿಲ್ಲಲಾಶಿಸಿದಾಗ
ನಸುನಕ್ಕು ಮೈ ಝಾಡಿಸಿತು ನಗದೇಹ.
ಒಳಗೆಲ್ಲ ನೂರು ಸಮರದ ನೋವು
ಕೊತಕೊತನೆ ಕುದಿವೆದೆಯ ಯಾತನೆಯ ಕಾವು
ಹಬೆಯ ಬೇಗೆಗೆ ಸಿಲುಕಿ ಅಪಜಯದ ಬೇರುಗಳ ಸಾವು ! || 1 ||
ಉತ್ತರದ ದಕ್ಷಿಣದ ಪೂರ್ವಪಶ್ಚಿಮದ
ವಿಸ್ತ್ತಾರ ಭೂವಲಯದಿಂದೊಳಗೊಳಗೆ ಹರಿದು ಬಂತು
ಸ್ವಾಧೀನತೆಯ ಸಮರಾಂಗಣವು ಕುಡಿದು ಕೆಳಗಿಳಿದ
ತಾಯ್ನೆಲಕೆ ಸತ್ತವರ ಕೆನ್ನೆತ್ತರಿನ ಧಾರೆ
ಪರ್ವತದ ಹೃದಯದಂಗಣಕೆ.
ಹೃದಯದಗ್ನಿಯಲಿ ಕಾದು ಕುದಿಕುದಿದು ಮೇಲೆದ್ದು
ಮೌನಶಿಖರದ ಬಿಗಿದ ಬಾಯ್ತೆರೆಸಿ
ಹೊಮ್ಮಿ ಹರಿಯಿತು ನಾಡ ಲಾವಾರಸದ ಮದ್ದು
ಮಾತನಾಡಿತು ಶಿಖರ ಕರಗುತೋಡಿತು ತಿಮಿರ
ತನ್ನೊಡಲ ರಕ್ತಮಾಂಸಗಳ ಅರೆದು
ನಿರ್ಜೀವ ಗೋರಿಗಳ ಮೇಲೆಲ್ಲ ಜೀವರಸವೆರೆದು
ತಂತಾನೆ ಆಯ್ತು ಆಹುತಿ ಅಗ್ನಿಶಿಖರ
ಹೊರಚೆಲ್ಲುತೀ ಯುಗದ ಈ ನೆಲದ ಉಮ್ಮಳದ ನಿನದ ! || 2 ||
ದಿವ್ಯಾಗ್ನಿ ಪರ್ವತವೆ ಭವ್ಯಾತ್ಮಜೀವನವೆ
ನಿನಗೆ ವಂದನೆಯದುವೆ ಈ ನೆಲದ ಸೇವೆ ! || 3 ||