ಹೇ ಗುರುವೇ ನಿನ್ನಡಿಗೆ
ಅನುದಿನವು ಮಣಿಯುವೆನು
ಎದೆಗೊತ್ತಿ ಶಿರಸವರಿ
ನೀನೆನ್ನ ಹರಸು || ಪ ||
ನನ್ನಿರವ ತಿಳಿಸಿಕೊಡು
ನನ್ನರಿವು ನನಗೆ ಕೊಡು
ಒಳಗಿನರಿಗಳ ತರಿವ
ಪರಿಯೆನಗೆ ಕಲಿಸು || 1 ||
ಜಗವ ರಂಜಿಸಬಲ್ಲ
ಸಪ್ತ ಸ್ವರಗಳನುಲಿಸು
ಎನ್ನೆದೆಯ ವೀಣೆಯನು
ಸಿದ್ಧಗೊಳಿಸು || 2 ||
ಭಾರತಿಯ ಜೊತೆಗೆನ್ನ
ಹೃದಯಶ್ರುತಿ ಮೇಳವಿಸು
ಸಮರಸದ ಸಂಗೀತ
ಸೃಷ್ಟಿಗೊಳಿಸು || 3 ||
ಕೀರ್ತಿ ಕಾಂಚನಗಳಿಗೆ
ಅಲೆವ ಮನವನು ನಿಲಿಸು
ಮರೆವಿನಾ ತೆರೆ ಸರಿಸು
ಬೆಳಕ ಹರಿಸು || 4 ||
ಸ್ವಚ್ಛಂದ ಮನಕಿಂದು
ಶೀಲಮೇಖಲೆ ಬಿಗಿಸು
ಪ್ರಸ್ತುತಿಗೆ ರಂಗವನು
ಅಣಿಯಗೊಳಿಸು || 5 ||
ವಾಚಿಕವು ಆಹಾರ್ಯ
ಆಂಗಿಕಗಳೆಲ್ಲವೂ
ತಾಯಡಿಗೆ ಮುಡಿಪೆಂಬ
ಭಾವ ಕಲಿಸು || 6 ||
ಉನ್ಮತ್ತ ನರ್ತಕಗೂ
ತಾಳ ಲಯಗಳ ಕಲಿಸು
ನೇಪಥ್ಯದಲಿ ನಿಂದು
ನನ್ನ ಕುಣಿಸು || 7 ||