ಗುರುವಿನಾಣತಿಯಂತೆ ನೀ ಬಂದೆ ಭಾರತಕೆ
ಅವರ ಮಾರ್ಗದಿ ನಡೆದು ಬೆಳೆದೆ ಬಾನೆತ್ತರಕೆ
ನನ್ನದೇನೂ ಇಲ್ಲ ಎಂಬರಿವ ಮೂಡಿಸಿದೆ
ಭಾರತೀಯರ ಮನದಿ ಬೇರೂರಿದೆ || ಪ ||
ಅನ್ಯ ನೆಲದಲಿ ಜನಿಸಿ ಬೆಳೆದ ಭಾರತಪುತ್ರಿ
ಶ್ರೀಮಾತೆ ಸುತೆಯಾದೆ ಧವಳ ಕುವರಿ
ಗುರುವಿನನುಗ್ರಹ ಪಡೆದ ವಿವೇಕ ಮಾನಸ ಪುತ್ರಿ
ಪರಮ ಗುರುವಿನ ಕೃಪೆಗೆ ಪಾತ್ರ ಸುಕುಮಾರಿ || 1 ||
ಬಾಲೆಯರಿಗೆ ಗುರುವು ವಿಧವೆಯರ ಬಾಳ್ಬೆಳಕು
ತರುಣಗಣದ ಕ್ರಾಂತಿ ಬೋಧಕಿಯು ನೀನಾದೆ
ಮಹಾವ್ಯಾಧಿಯ ಸೋಂಕು ಎರಗೆ ಮಾನವ ಕುಲಕೆ
ಸ್ವಚ್ಛತೆಯ ಕೈಗೊಂಡು ಮೇಲ್ಪಂಕ್ತಿ ನೀನಾದೆ || 2 ||
ಆತ್ಮ ಸುಧೆಯಲಿ ಮಿಂದು ಬೋಧಿಸಿದೆ ತತ್ವವ
ಜ್ಞಾನ ಬೋಧೆಯ ಸುರಿದು ಎಬ್ಬಿಸಿದೆ ಸ್ವತ್ವವ
ಗುರುವಿನಾಂತರ್ಯದ ಪ್ರತಿರೂಪ ನೀನಾದೆ
ನಿನ್ನ ಸರ್ವಸ್ವವನು ಸೇವೆಗೆ ನಿವೇದಿಸಿದೆ || 3 ||