ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿ

ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿ
ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ
ಬೂದಿ ಗೊಬ್ಬರದಿಂದ ತೆನೆಯೊಂದು ನೆಗೆದುಬರೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ                 || ಪ ||

ನನ್ನ ದೇಹದ ಬೂದಿ ಹೊಳೆಯಲ್ಲಿ ಹರಿಯಬಿಡಿ
ತೇಲಿ ಬೀಳಲಿ ಮೀನ ಬಾಯಿಯಲ್ಲಿ
ಮುಷ್ಠಿ ಬೂದಿಯ ತಿಂದು ಪುಷ್ಪವಾಗಲು ಮೀನು
ಧನ್ಯವಾಯಿತು ಹುಟ್ಟು ಸಾವಿನಲ್ಲಿ                 || 1 ||

ನನ್ನ ದೇಹದ ಬೂದಿ ಕೊಳದಲ್ಲಿ ಬೀರಿಬಿಡಿ
ತಾವರೆಯು ದಿನದಿನವು ಅರಳುವಲ್ಲಿ
ಬೂದಿ ಕೆಸರನು ಕೂಡಿ ಹೊಸ ಪಂಕಜವು ಮೂಡೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ                 || 2 ||

ಸತ್ತ ಮೇಲಾದರೂ ದೇಹ ಸೇವೆಗೆ ನಿಲಲಿ
ಇಂದಿಗೀ ನರಜನ್ಮ ಸೇವೆಗೆಂದು
ತನ್ನ ಸ್ವಾರ್ಥವ ನೆನೆದು ವ್ಯರ್ಥವಾಗಿದೆ ದೇಹ
ನಿಜ ಸೇವೆ ಮಾಡಲಿಕೆ ಬರಲಿ ಮುಂದು              || 3 ||

One thought on “ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿ

  1. ವಾವ್ ಎಂಥ ಅರ್ಥಗರ್ಭಿತ ಸಾಹಿತ್ಯ ಇದನ್ನು ಶಿವರಂಜಿನಿ ರಾಗದಲ್ಲಿ ಹಾಡಿದರೆ ಕೇಳುಗರ ಮನ ಸೂರೆಗೊಳ್ಳುವುದು ಖಂಡಿತ. ಹಾಗೂ ನಾನೂ ಸಹ ಪ್ರಯತ್ನಿಸುವೆ.

Leave a Reply

Your email address will not be published. Required fields are marked *