ಎಂಥ ಬಲು ಸೊಬಗಿನದು ನಮ್ಮ ದೇಶ

ಎಂಥ ಬಲು ಸೊಬಗಿನದು ನಮ್ಮ ದೇಶ !
ಈ ನಮ್ಮ ತಾಯ್ನೆಲ                              || ಪ ||

ಉತ್ತರಕೆ ನೋಡಲ್ಲಿ ಯಾರಿಹನು? ಕಿರೀಟದಂತೆ
ಶೋಭಿಸುವ ಹಿಮರಾಜ ತಾನಿಹನು
ದಕ್ಷಿಣದ ಕಡೆ ನೋಡಲಲ್ಲಿ, ವಿಶಾಲ ಸಾಗರ
ತಾನು ಮಾತೆಯ ಪಾದವನ್ನು ತೊಳೆಯುತಾಲಿರುವಾ,
ವೈಭವದ ನಾಡು                                  || 1 ||

ಗೋದಾವರಿ ಕೃಷ್ಣೆ ತುಂಗೆಯರು ಹರಿಯುವರು ಇಲ್ಲಿ
ನಾಡ ಮಕ್ಕಳ ಮುದದಿ ಪೋಷಿಪರು
ಭಾರತಾಂಬೆಗೆ ಹಾರದಂತೆ ಹರಿಯುತಿರುವಳು ತಾಯಿ ಗಂಗೆ
ನಾಡ ಮಕ್ಕಳ ಪಾಪ ತೊಳೆಯುವಳು, ಈ ಪುಣ್ಯಭೂಮಿ  || 2 ||

ಬಸವ ಶಂಕರ ಮಧ್ವಯತಿವರರು, ಬೆಳಗಿಸಿದರಿಲ್ಲಿ
ಹಿಂದು ಧರ್ಮದ ದಿವ್ಯ ಜ್ಯೋತಿಯನು
ಲಕ್ಷ್ಮಿ ಪದ್ಮಿನಿ ಶಿವ ಪ್ರತಾಪರು ಭಾರತಾಂಬೆಯ ವೀರ ಕುವರರು
ತೋರಿದರು ನಿಜ ಶೌರ್ಯ ಸಾಹಸವಾ, ಈ ವೀರಭೂಮಿ  || 3 ||

ಹಿಂದು ಭೂಮಿಯ ಪರಮ ವೈಭವವಾ,
ಸಾಧಿಸಲು ತೋರಿದ ಕೇಶವರ ಈ ಸಂಘಧ್ಯೇಯವ
ಸ್ವೀಕರಿಸಿ ನಿಜ ಬದುಕಿನಲ್ಲಿ, ಮುಂದೆ ಸಾಗು ಕಾರ್ಯಪಥದಲಿ
ಆಗಲೇ ನಿನ್ನ ಜೀವನ ಧನ್ಯ, ಈ ಕರ್ಮಭೂಮಿ        || 4 ||

Leave a Reply

Your email address will not be published. Required fields are marked *

*

code