ಏನೀ ಪೌರುಷ ಅಭಿಮಾನದ ಬಲಿದಾನ

“ಏನೀ ಪೌರುಷ ಅಭಿಮಾನದ ಬಲಿದಾನ ? || ಪ ||

ದೇಶದ ದೇಹದ ಮುಡಿಗೆದರುವ ಅಪಮಾನ ?
ತಾಯ್ನಾಡಿನ ತಲೆಗೂದಲೊಳೇನೀ ಹೇನಿನ ಸೇನೆ ?
ದಿನ ಬೆಳಗಾದರೆ ಉಪಟಳದುರಿ ಭೀಕರ ತಲೆಬೇನೆ !
ಗಾಂಡೀವ, ಸುದರ್ಶನ, ಗಂಡೆದೆ ಭೀಮನ ಬೆಂಬಲದಿ
ಧರ್ಮಜನಾಳ್ವಿಕೆ ವಿಜೃಂಭಿಸಿದೀ ಭಾರತದಿ
ದಿಲ್ಲಿಯ ಪೀಠದಿ ದ್ರೌಪದಿಯನುಜ ನಪುಂಸಕನು
ಜನತಾ ಕೋಟಿಯ ರಾಜ್ಯಾಡಳಿತವ ವಹಿಸಿದನೇನು?”
ಹಿಮನಗದೊಳು ಯುಗಯುಗಗಳು ಮಲಗಿದ ಶಿಲೆಯೊಂದು
ಬಾಯ್ದೆರೆದಾಕಳಿಸುತ ಮೇಲೇಳುತ ಕೇಳುತಿದೆ ! || 1 ||

“ಕಲ್ಗುಂಡಿಗು ನಿದ್ರಾಭಂಗವೆ ? ನಿಜ, ನೀನೆನ್ನುವುದನುಜ !
ಸಂದಿತು ದ್ವಾಪರ, ಕಳೆಯಿತನಂತರ ಸ್ವರ್ಣಿಮ ಸಾಮ್ರಾಜ್ಯ
ಬಂದಿದೆ, ಬಲುಬೇಸರ ತಂದಿದೆ ರಾಕೆಟ್ಟಿನ ಶತಮಾನ
ಪುರುಷರಿಗಿಲ್ಲವು ಮೊದಲಿನ ಸಾಹಸ ಪೌರುಷ ಅಭಿಮಾನ
ಗಾದಿಯನೇರಿವೆ ಶಕುನಿಯ ವಂಶದ ವೃಕ, ಬಕ, ನರಿ, ಶ್ವಾನ !
ಹೋಳಾಯಿತು ಭಾರತ, ಹಾಳಾಯಿತು ಗೌರವ ಸಮ್ಮಾನ ;
ಕೆರಳುವೆ, ಉರುಳುವೆ, ಅರಿಗಳನರೆಯುವೆ, ನೀನರಿತರೆ ಕಥೆಯ
ದೀನದರಿದ್ರರ ತವರಾಗಿರುವೀ ತಾಯ್ನಾಡಿನ ವ್ಯಥೆಯ”
ಎಂದುತ್ತರವೀಯುತ ಹರಿಯುತಲಿಹುದಿಂದು
ಕಂಬನಿದುಂಬುತ ಸನಿಹದ ನದಿ ಸಿಂಧು ! || 2 ||

Leave a Reply

Your email address will not be published. Required fields are marked *

*

code