ಎಚ್ಚೆತ್ತ ಭಾವದೊಳು ರಾಷ್ಟ್ರಸೇವೆಯಗೈಯೆ

ಎಚ್ಚೆತ್ತ ಭಾವದೊಳು ರಾಷ್ಟ್ರಸೇವೆಯಗೈಯೆ
ದನಿಯಾಗು ಓ ಮನವೆ ನಾಡು ನುಡಿಗೆ
ಎಲ್ಲರೊಳಗೊಂದಾಗು, ಎಲ್ಲರೊಳು ಹಿತವಾಗು
ಕರವಿಡಿದು ಮುನ್ನಡೆಸು ತಾಯಗುಡಿಗೆ || ಪ ||

ಹುಟ್ಟು ಸಾವಿನ ನಡುವೆ ಬಡತನವು ಸಿರಿತನವು
ಎನಿತೆನಿತೋ ವಿವಿಧತೆಯು ಬಾಳ ರಥಕೆ
ಕಷ್ಟವೇನೇ ಬರಲಿ ಸುಖವು ಕಾದಿದೆ ಮುಂದೆ,
ಧರ್ಮಸೂತ್ರವೆ ದಿಟವು ಧ್ಯೇಯ ಪಥಕೆ || 1 ||

ರಾಷ್ಟ್ರದೇಕತೆಯಲ್ಲಿ ಹಲವು ಭಾಷೆಗಳಿರಲು
ಸಾಹಿತ್ಯ ಸಂಪದದ ಭಾವವೊಂದೇ
ವಿಧ ವಿಧ ಪ್ರಕಾರಗಳ ಕೃತಿರೂಪಿ ಕಾಯಕಕೆ
ಸಾಮರಸ್ಯವ ಬೆಸೆವ ಕನಸು ಒಂದೇ || 2 ||

ದೇವನಿರ್ಮಿತ ಭೂಮಿ ನಮಗಾಗಿ ಒಲಿದಿರಲು
ದೇಶಭಕ್ತಿಯ ಮಂತ್ರ ಪಠಿಸಿ ಪಠಿಸಿ
ಭ್ರಷ್ಟತೆಯ ಧಿಕ್ಕರಿಸಿ, ಆತ್ಮವಿಸ್ಮೃತಿ ದಹಿಸಿ
ಅರ್ಪಣೆಯ ಭಾವದೊಳು ಕಾಯ ಸವೆಸಿ || 3 ||

Leave a Reply

Your email address will not be published. Required fields are marked *