ಈ ಆತ್ಮ ಅವಿನಾಶಿ ಪರಮಾತ್ಮನಂಶ

ಈ ಆತ್ಮ ಅವಿನಾಶಿ ಪರಮಾತ್ಮನಂಶ
ತವಕಾಯ ಕೈಲಾಸ ನೀನೇ ಮಹೇಶ
ಈ ತತ್ವ ಚಿರಸತ್ಯ ಓ ಸಾಧಕಾ
ಮನುಜತ್ವದಮರತ್ವದಾರಾಧಕಾ || ಪ ||

ಅಂಗಾಂಗಗಳ ದಾಸ ನೀನಾಗಬೇಡ
ಬಂಗಾರ ಶೃಂಗಾರಗಳ ಮೋಹ ಬೇಡ
ಪಂಚೇಂದ್ರಿಯದ ಸಂಚಿಗೊಳಗಾಗಬೇಡ
ವಿಷಯಾದಿ ವಿಷವ್ಯಾಧಿಗೀಡಾಗಬೇಡ || 1 ||

ಕಡಿವಾಣ ಹಾಕಯ್ಯ ನಿನ್ನಾಸೆಗಳಿಗೆ
ಬಿಡುಬಾಣ ನಿನ್ನಾರು ಅರಿವರ್ಗಗಳಿಗೆ
ಹಿರಿದಾದ ಆದರ್ಶ ಕಣ್ಮುಂದೆ ಇರಲಿ
ಸರಿದಾರಿಯಲಿ ಸಾಗು ಬಂದದ್ದು ಬರಲಿ || 2 ||

ಆರೋಗ್ಯವೇ ಭಾಗ್ಯ ಬೇರೆಲ್ಲ ಮಿಥ್ಯ
ಆನಂದದಧಿಕಾರಿ ನೀನಾಗು ನಿತ್ಯ
ತವಜೀವನಕೆ ನೀಡು ನವಕಾಯಕಲ್ಪ
ಕಡೆದೀಗ ನಿಲಿಸಯ್ಯ ಹೊಸಬಾಳಶಿಲ್ಪ || 3 ||

ಒಳಗಣ್ಣ ತೆರೆಯೀಗ ನೀ ಶಾಂತನಾಗಿ
ಬೆಳಕನ್ನು ಬರಮಾಡು ಹೇ ಜ್ಞಾನಯೋಗಿ
ಅಷ್ಟಾಂಗಗಳ ದಿವ್ಯ ಸೋಪಾನವೇರು
ಜಂಜಾಟ ಸಂಕಷ್ಟಗಳಿಗಂತ್ಯ ಸಾರು || 4 ||

Leave a Reply

Your email address will not be published. Required fields are marked *