ಧಗಧಗಿಸಿದೆ ಹೈಮಾದ್ರಿಯ ಒಡಲು
ಭೋರ್ಗರೆದಿದೆ ಯುವಶಕ್ತಿಯ ಕಡಲು
ಜಗದ ಸವಾಲಿಗೆ ಉತ್ತರ ಕೊಡಲು
ನವನಿರ್ಮಾಣದ ದೀಕ್ಷೆಯ ತೊಡಲು
ಜೈಜೈ ಮಾತಾ ಭಾರತಮಾತಾ… ಜೈಜೈ ಮಾತಾ ಭಾರತಮಾತಾ… || ಪ ||
ಶತಶತಮಾನದ ಸಾಹಸ ಚರಿತೆ
ಸಾಧನೆಗದುವೇ ಸ್ಪೂರ್ತಿಯ ಒರತೆ
ಮರಳಿಗಳಿಸಲು ಕಳೆದಿಹ ಘನತೆ
ಟೊಂಕವ ಕಟ್ಟಿದೆ ಜಾಗೃತ ಜನತೆ || 1 ||
ಮೈಮರೆವಿನ ಕಾಲವು ಕಳೆದಿಹುದು
ಆಣ್ವಸ್ತ್ರದ ಹಿರಿತನ ಲಭಿಸಿಹುದು
ತ್ಯಜಿಸಿರಿ ಅಂಜಿಕೆ ಭ್ರಮೆ ಕೀಳರಿಮೆ
ಸಾರುವ ವಿಶ್ವಕೆ ನಾಡಿನ ಗರಿಮೆ || 2 ||
ಸಹಿಸಲು ಒಲ್ಲೆವು ದ್ರೋಹಿಗಳಾಟ
ದಹಿಸಲು ಬಲ್ಲೆವು ಅರಿಗಳ ಕೂಟ
ಕೋಟಿಸುಪುತ್ರರೆ ಬನ್ನಿರಿ ಕೂಡಿ
ನಾಡಸಮಗ್ರತೆಯನು ಕಾಪಾಡಿ || 3 ||