ಧರ್ಮತಳಹದಿ ಮೇಲೆ ಭವ್ಯ ಭಾರತಭವನ
ಜ್ಞಾನ ಸ್ತನ್ಯದಿ ಜಗವ ಪೊರೆದ ತಾಣ
ಕುಸಿದಿರುವ ಸ್ತಂಭಗಳ, ಮತ್ತೆ ಸರಿ ಪಡಿಸೋಣ
ತೊಡಗೋಣ ಮತ್ತೊಮ್ಮೆ ವಿಜಯ ಯಾನ || ಪ ||
ಮೇಘಸ್ಫೋಟವದಾಯ್ತು ಭುವಿ ಬಿರಿದು ಕುಸಿದಾಯ್ತು
ಗಿರಿ ಜರಿದು ಕಂಪಿಸಿತು ಅರಿವಾಗಲಿಲ್ಲ
ಅತಿ ಗಳಿಕೆ ಬಯಕೆಗಳ ಪ್ರಲಯ ಝಂಝಾವಾತ
ಸರಳತೆಯ ಸಂದೇಶ ಕೇಳಲಿಲ್ಲ || 1 ||
ಹೊನ್ನಗಳಿಕೆಯ ಬಯಕೆಗೆನ್ನ ವಿಕ್ರಮವಾಯ್ತು
ಔಷಧವೂ ಶಿಕ್ಷಣವೂ ಬಿಕರಿಯಾಯ್ತು
ಅನ್ಯೋನ್ಯ ಅನುಕೂಲ ಭಾವನೆಯು ಬರಿದಾಯ್ತು
ಹಕ್ಕುಗಳು ಸೊಕ್ಕೇರಿ ಮೆರೆದುದಾಯ್ತು || 2 ||
ವಿತ್ತದಾರ್ಜನೆಯಲ್ಲ ಚಿತ್ತವಿಕಸನ ಬೇಕು
ಕರ್ತವ್ಯ ಹೊಣೆತನವು ಚಿಗುರೊಡೆಯಬೇಕು
ಸ್ವತ್ವ, ಸತ್ವಾದಿಗಳು ಅಭಿವ್ಯಕ್ತಗೊಳಬೇಕು
ನಿಃಶ್ರೇಯಸಾಭ್ಯುದಯ ಸಿದ್ಧಿ ಬೇಕು || 3 ||
ಕೃಷಿ, ಯೋಗ, ವಿಜ್ಞಾನ,ಕಲೆ,ವೇದ ಶಿಕ್ಷಣದಿ
ಅಸ್ಮಿತೆಯು, ದಿವ್ಯತೆಯು ಬೆಳಗಬೇಕು
ಶಿಖರಗಾಮಿಗಳೆಮಗೆ ಈ ಶುಭಸಂಧಿ ಕಾಲದಲಿ
ನೆರೆದ ವಿದ್ವಜ್ಜನರ ಹರಕೆ ಬೇಕು || 4 ||