ಚಿಮ್ಮುತಿದೆ ನೋಡಿಲ್ಲಿ ಧ್ಯೇಯ ಕಾರಂಜಿ

ಚಿಮ್ಮುತಿದೆ ನೋಡಿಲ್ಲಿ ಧ್ಯೇಯ ಕಾರಂಜಿ
ಹೊಮ್ಮಿಸುತ ಹೊಂಗನಸಿನೋಕುಳಿಯ ಮನಮನದಿ || ಪ ||

ನಿಷ್ಕ್ರಿಯತೆ ಕರಿನೆರಳ ಚಾಚಿರಲು ನಾಡಗಲ
ಜಡತೆಯಿಂ ಮೈಮರೆತು ಮಲಗಿರಲು ಹಿಂದು ನೆಲ
ಸ್ಫೂರ್ತಿ ಉತ್ಸಾಹಗಳ ಹೊನಲನ್ನು ಹರಿಸಿ
ಮುಚ್ಚಿರುವ ಭ್ರಮೆಯಾಂತ ಕಂಗಳನು ತೆರೆಸಿ || 1 ||

ನಾಡನೋವಳಿಸುತಿಹ ದಿವ್ಯ ಸಂಜೀವಿನಿಯು
ಸಾವನ್ನೆ ಸಾಯಿಸುವ ಈ ಜೀವವಾಹಿನಿಯು
ವೇದಘೋಷದ ನೆಲದ ಪುಣ್ಯತಮ ಸ್ರೋತ
ಶಿವಪ್ರತಾಪರ ಶೌರ್ಯದಮರ ಸಂಕೇತ || 2 ||

ಕೇಶವನು ನೆಟ್ಟಿರುವ ಸಂಘರೂಪದ ಸಸಿಗೆ
ನೀರುಣಿಸಿ ಅನವರತ ಪೋಷಿಸಿತು ಈ ಒಸಗೆ
ಹೀನತೆಯ ದೀನತೆಯ ರಾಡಿಯನು ತೊಳೆದು
ಆತ್ಮವಿಶ್ವಾಸ ತಾಯೊಲವ ಮೈತಳೆದು || 3 ||

ಧರ್ಮರಕ್ಷಣೆಗೈವ ಕರ್ಮವೀರರ ಸ್ಫೂರ್ತಿ
ಜಗದಗಲ ಪಸರಿಸಿದೆ ಭಾರತದ ಘನಕೀರ್ತಿ
ಸಿರಿಗಂಗಾಜಲದಂತೆ ಪಾವನ ಸ್ವರೂಪಿ
ಚೈತನ್ಯ ಚಿಲುಮೆಯಿದು ವರವಿಶ್ವವ್ಯಾಪಿ || 4 ||

Leave a Reply

Your email address will not be published. Required fields are marked *