ಭಾರ್ಗವನ ಬಾಹುಬಲ ಭುಜಕೋಟಿಗಳ

ಭಾರ್ಗವನ ಬಾಹುಬಲ ಭುಜಕೋಟಿಗಳ ತುಂಬಿ
ಭೋರ್ಗರೆಯುತಿಹುದಿಲ್ಲಿ ನೋಡ ಬನ್ನಿ
ಸ್ವರ್ಗಸದೃಶ ಭವ್ಯ ಭಾರತವ ನಿರ್ಮಿಸುವ
ಮಾರ್ಗದಲಿ ಯುವಜನರೆ ಸಾಗಿ ಬನ್ನಿ
ಸಾಹಸದ ಇತಿಹಾಸ ರಚಿಸ ಬನ್ನಿ || ಪ ||

ಹಿಂದು ದೇಶದ ಹಿರಿಮೆ ಜಗಕೆಲ್ಲ ಸಾರುತಲಿ
ಬಂಧುಭಾವದಿ ಬಾಳ ಧನ್ಯತೆಯ ಕಾಣುತಲಿ
ಸಿಂಧು ಜಲಧಿಯಸಂಖ್ಯ ಬಿಂದುಬಿಂದುಗಳಂತೆ
ಒಂದುಗೂಡುತ ಬಲವ ಹೊಂದ ಬನ್ನಿ || 1 ||

ದುಷ್ಟತೆಯ ಹೆಡೆಮೆಟ್ಟಿ ಭ್ರಷ್ಟತೆಯ ಬಡಿದಟ್ಟಿ
ಕಷ್ಟಕಾರ್ಪಣ್ಯಗಳ ಕೋಟೆಯನು ಪುಡಿಗಟ್ಟಿ
ಶ್ರೇಷ್ಠತಮ ಸಂಸ್ಕೃತಿಯ ಶ್ರೇಷ್ಠತೆಯ ಮೆರೆಯಿಸುತ
ಅಷ್ಟ ದಿಕ್ಕುಗಳನ್ನು ಜಯಿಸ ಬನ್ನಿ || 2 ||

ವಿಘ್ನ ಸಂತೋಷಿಗಳು ಮಗ್ನರಾಗಿಹರಿಂದು
ಭಗ್ನಗೈಯಲು ನಾಡ ದ್ರೋಹಿಗಳನೊಳಗೊಂಡು
ಅಗ್ನಿಪರ್ವತದಂತೆ ದಾವಾಗ್ನಿಯನು ಕಾರಿ
ಯಜ್ಞಪುರುಷನ ತೆರದಿ ಭರದಿ ಬನ್ನಿ || 3 ||

ಬೆಂಬಲವ ನೀಡುತಿವೆ ಸಹ್ಯಾದ್ರಿ ಶೃಂಗಗಳು
ತುಂಬಿಸಿವೆ ಸ್ಫೂರ್ತಿಯನು ಸಾಹಸದ ಗಾಥೆಗಳು
ಸ್ತಂಭದಿಂದುದಿಸಿ ಮೈತಳೆದ ನರಸಿಂಹನೊಲು
ಸಂಘಶಕ್ತಿಯ ರೂಪ ಧರಿಸಬನ್ನಿ || 4 ||

Leave a Reply

Your email address will not be published. Required fields are marked *

*

code