ಭರವಸೆಗಳ ನವನೇಸರ ತಾನುದಿಸುತ ಬರಲು

ಭರವಸೆಗಳ ನವನೇಸರ ತಾನುದಿಸುತ ಬರಲು
ಸುಖಶಾಂತಿಯ ಸೌಗಂಧವ ತರುತಿದೆ ತಂಪೆರಲು
ಜಗದೊಡತಿಯ ಪದತಲದಲಿ ಪೊಡಮಡುತಿದೆ ಜಗವು
ಅಭಯಾಶಿಷ ಸಂಕೇತವು ಮಾತೆಯ ನಗುಮೊಗವು        || ಪ ||

ಹಳೆಸೂತ್ರಕೆ ಹೊಸಭಾಷ್ಯವ ಬರೆಯುವ ಗುರುಭಾರ
ಪರಿಮಾರ್ಜನೆ ಪರಿವರ್ತನೆ ಗೆಳಸುವ ಶುಭಕಾಲ
ಹೊಸ ತಾಂತ್ರಿಕ ಬಲದಿಂದಲೇ ಹಳೆಯೊಳಿತನು ಮಥಿಸಿ
ನವನೀತವ ಸಂಸ್ಕರಿಸುತ ನವಘೃತವನು ಉಣಿಸಿ          || 1 ||

ಅಸ್ಪೃಷ್ಯತೆ, ದುರ್ವ್ಯಸನದ, ಕೊಳೆ ಕಿಲುಬನು ಅಳಿಸಿ
ರಾಷ್ಟ್ರೀಯತೆ, ಸಂಪನ್ನತೆ, ಬಂಧುತ್ವವ ಬೆಳೆಸಿ
ಶಾಸ್ತ್ರಾರ್ಥದ ಶ್ರೀ ರಕ್ಷೆಗೆ ಶಸ್ತ್ರಾಸ್ತ್ರವ ಗಳಿಸಿ
ಮನುಜತ್ವದ ನಿಜಧರ್ಮಕೆ ಜಗದೊಲವನು ಬೆಳೆಸಿ        || 2 ||

ರುಧಿರಾರ್ಚನೆ ಬಲಿದಾನದ ವೀರೋಚಿತ ಚರಿತೆ
ಉಸಿರಾಗಲಿ ಕಸುತುಂಬಲಿ ವರಸಂತನ ಕವಿತೆ
ನವಭಾರತ ನಿರ್ಮಾಣಕೆ ಶ್ರಮಸಮಯವ ನೀಡಿ
ಯುವಸಂಕುಲ ಒಗ್ಗೂಡುತ ಜಯಘೋಷವ ಹಾಡಿ       || 3 ||

Leave a Reply

Your email address will not be published. Required fields are marked *