ಭರತವರ್ಷದಿತಿಹಾಸ ಪುರುಷನಂತರಂಗ

ಭರತವರ್ಷದಿತಿಹಾಸ ಪುರುಷನಂತರಂಗ ತೆರೆಯಲಿ
ಗತ ಸಹಸ್ರ ವರ್ಷದೆಲ್ಲ ವಿಸ್ಮೃತಿಯ ತೆರೆಯ ಹರಿಯಲಿ          || ಪ ||

ವಿವಿಧ ವಾದ ಹೊಕ್ಕಿರಿದ ಜಗದ ಜನರದೆಯ ದೀನ ನಾದ
ಅಲೆದು ಬಂದು ತಂಗಿಹುದು ದಣಿದು ಹಿಮನಗದ ನೆಲದೊಳೀಗ
ಸುಭಾಗಿ ಧಾರ್ಮಿಕರೆ ಕಾರ್ಮಿಕರೆ ಕರೆ ಕೇಳಿ ಮೇಲಕೇಳಿ
ಅಳಲನಾಂತ ಜರ್ಝರಿತ ಭೀತ ಮಾನವತೆಗಭಯ ಹೇಳಿ        || 1 ||

ಅಂದಿನಿಂದಲೇನೇನು ನಂದಿತೀ ರಾಷ್ಟ್ರ ಹೃದಯದೊಳಗೆ
ನಿದ್ದೆ ಕಳೆದು ಮೇಲೆದ್ದು ಬರಲಿ ನಮ್ಮದೇ ನಾಡಿನೊಳಗೆ
ಹಿಂದು ಕುಲದ ಯುಗ ಯುಗದ ಸ್ವರದ ಗಂಗಾತರಂಗ ನೆಗೆದು
ಜಗದ ದಾಹ ಹಿಂಗಿಸಲಿ ನಿಂತ ಧಾರೆ ಭೋರ್ಗರೆದು ಹರಿದು     || 2 ||

ತೀವ್ರ ವೇಗ ನವ ರಾಗಕೀಗ ಸ್ವಾಗತಿಸುತಿಹುದು ಗುರಿಯು
ಹೃದಯ ಬೆಸೆದ ಸಂಘಟನೆ ಶಕ್ತಿಗೆದುರಾವುದಿಹುದು ತಡೆಯು ?
ಸುಪ್ತ ಸ್ವಾಭಿಮಾನದುರಿ ಕೆರಳಿ ನವ ದಿವ್ಯ ಭಾವವರಳಿ
ಆರ್ಯ ಭೂ ಪರಂಪರೆಯ ಸ್ರೋತ ತಡೆಯೊಡೆದು ನುಗ್ಗಿ ಬರಲಿ  || 3 ||

ಯಶೋಮಹಲಿನುತ್ತುಂಗ ಶೃಂಗದುದಾತ್ತ ರಂಗಕೇರಿ
ತಾಯಿ ಭುವಿಯ ದಿಗ್ವಿಜಯ ಭೇರಿ ದಿಗ್ದಿಗಂತಕಿರಲಿ ಸೇರಿ
ಲಕ್ಷ ಮೋಕ್ಷದಾನಂದ ಧೂಳಿನೊಂದೊಂದು ಕಣದ ಸ್ಪರ್ಶ
ಶೋಕ ಹರ್ಷ ಸಂಘರ್ಷಗಳಲಿ ಜೊತೆಗಿರಲಿ ಭರತ ವರ್ಷ        || 4 ||

Leave a Reply

Your email address will not be published. Required fields are marked *

*

code