ಭರತಮಾತೆ ಓ ಅನಂತ ತ್ಯಾಗ ವಿಭವ ಶೋಭಿತೆ

ಭರತಮಾತೆ ಓ ಅನಂತ ತ್ಯಾಗವಿಭವ ಶೋಭಿತೆ
ಜನ್ಮದಾತೆ ಓ ಅಸೀಮ ಶೌರ್ಯಸುಮನ ಪೂಜಿತೆ || ಪ ||

ನಚಿಕೇತ ಬಾಲ ಭರತ ಪಾರ್ಥಪುತ್ರರಾನನ
ಹೂವು ಮುಡಿಗೆ ನಿನ್ನ ಗುಡಿಗೆ ಹಸುಳೆತಳಿರ ತೋರಣ
ಭೀಮ ಭೀಷ್ಮ ರಾಮ ಶ್ಯಾಮ ದಿವ್ಯನಾಮ ಕೀರ್ತನ
ಶಸ್ತ್ರಕ್ವಣನ ಸಮರಗಾನ ನಿನಗೇ ನಿವೇದನ || 1 ||

ಭರತಮಾತೆ ಜನ್ಮದಾತೆ ಹೇ ಅನಿಂದ್ಯ ವಂದಿತೆ
ಧರ್ಮಪ್ರೀತೆ ಶೀಲಸ್ನಾತೆ ಧವಳ ಯಶಾಲಂಕೃತೆ
ಭಕ್ತರಮಲ ಹೃದಯಕಮಲ ನಿನ್ನ ಚರಣಕರ್ಪಣೆ
ಬಾಳೆನೆಲ್ಲ ರುಧಿರವೆಲ್ಲ ಆಗಲಿದೋ ಸಮರ್ಪಣೆ || 2 ||

ಮಡಿದರೇನು ದೇಹವಿಂದು ದಾರಿದೀಪವುರಿವುದು
ನವಜನಾಂಗ ನೆಗೆದು ಬಂದು ತೈಲವದಕೆ ಸುರಿವುದು
ಪೂಜೆ ಭಜನೆ ಮುಗಿಯದೆಂದು ತಳಿರು ಹೂವು ಬಾಡದು
ಅಡಿಗೆ ಮುಡಿಗೆ ಅಂತೆ ಗುಡಿಗೆ ರಕ್ಷೆ ನಿಂತ ನಾಡಿದು || 3 ||

Leave a Reply

Your email address will not be published. Required fields are marked *

*

code