ಭರತಭೂಮಿಯ ಅಮರ ದಿವ್ಯಾಗ್ನಿ ಓ ಜ್ವಾಲೆ
ನಿನ್ನೊಳಿಹುದೆಲ್ಲವನು ದಹಿಸುವನಂತ ಕಾವು || ಪ ||
ಹಿಂದುಗಳ ಹೃದಯಾಂತರಾಳದೊಳು ಇಹ ಜ್ವಾಲೆ
ಘೋರ ಜ್ವಾಲಾಮುಖಿಯೆ ನಿನಗಿಲ್ಲ ಸಾವು || ಅ.ಪ ||
ಭೂಮ್ಯಾಂತರಿಕ್ಷಗಳನಾವರಿಸಿ ಮಾರ್ದನಿಸಿ
ಚತುರ್ವೇದ ವೇದಾಂಗಗಳ ಜ್ಞಾನ ಹರಿಸಿ
ಹೃದಯ ಹೃದಯೊಳುರಿದು ಹೊಮ್ಮುತಿಹ ಓ ಜ್ವಾಲೆ
ನಿನ್ನೊಳಿದೆ ಕಲ್ಲುಗಳ ಕರಗಿಸುವ ಕಾವು || 1 ||
ಗೀತೆಯನು ಪಡೆದಿರುವ ಅಮರತೆಯ ಕುಡಿದಿರುವ
ನಿನಗೆಂತು ಬಂದೀತು ಭಯ ಸಾವು ನೋವು
ಆತ್ಮದಾರಾಧಕರ ಅಧಿದೈವ ಓ ಜ್ವಾಲೆ
ನಿನ್ನೊಳಿದೆ ಜಲಧಿಗಳನಿಂಗಿಸುವ ಕಾವು || 2 ||
ಶತಮಾನ ಶತಗಳನು ಏರಿಳಿದು ಇಳಿದೇರಿ
ಸಫಲತೆಯ ಸೋಪಾನಗಳನೇರುತಿರಲು
ಸಾಧಕರ ಭವ್ಯ ಮಹದಾಸೆಗಳ ಓ ಜ್ವಾಲೆ
ನಿನ್ನೊಳಿದೆ ಜಗವನ್ನೆ ಭಂಗಿಸುವ ಕಾವು || 3 ||
ತಾರುಣ್ಯದುತ್ಸಾಹ ಮೈತುಂಬ ತುಂಬಿರಲು
ಮುಡಿಪಾಗಿ ನಿಂದಿರಲು ನಿನಗಾಗಿ ನಾವು
ತೀರದಿಹ ತೈಲವಿದೆ ಆರದಿರು ಓ ಜ್ವಾಲೆ
ನಿನ್ನೊಳಿದೆ ದಹಿಸಿ ಸೃಜಿಸುವನಂತ ಕಾವು || 4 ||